ಮಕ್ಕಳಿಗೆ ವಿದ್ಯೆ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಿ : ಬಿ.ಕೆ ಸಂಗಮೇಶ್ವರ್
ಭದ್ರಾವತಿ ಹೊಸ ಸೇತುವೆ ರಸ್ತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಶಾಲಾ ವಾರ್ಷಿಕೋತ್ಸವ ವಿಇಎಸ್ ಸಾಂಸ್ಕೃತಿಕ ಸಂಭ್ರಮ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ: ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಲು ಅವರನ್ನು ವಿದ್ಯೆ ಜೊತೆಗೆ ಕ್ರೀಡೆ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತೆ ಮಾಡಬೇಕೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಶನಿವಾರ ಹೊಸ ಸೇತುವೆ ರಸ್ತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಶಾಲಾ ವಾರ್ಷಿಕೋತ್ಸವ ವಿಇಎಸ್ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಮಕ್ಕಳಿಗೆ ವಿದ್ಯೆ ಮತ್ತು ಜ್ಞಾನ ಅತ್ಯಂತ ಅವಶ್ಯಕವಾಗಿದೆ. ಮಕ್ಕಳು ಈ ಮೂಲಕ ತಮ್ಮ ಮುಂದಿನ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ಸ್ವತಂತ್ರ್ಯವಾಗಿ ಬದುಕಬಹುದು. ಈ ಹಿನ್ನಲೆಯಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದರು.
ದೇಶದ ಇತರೆ ಯಾವ ರಾಜ್ಯದಲ್ಲೂ ಸಹ ಸರ್ಕಾರಿ ನೌಕರರು ತಮ್ಮದೇ ಆದ ಸ್ವಂತ ವಿದ್ಯಾಸಂಸ್ಥೆ ಹೊಂದಿಲ್ಲ. ಈ ವಿದ್ಯಾಸಂಸ್ಥೆ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿಯಾಗಿದೆ. ಈ ಸಂಸ್ಥೆ ಸಂಸ್ಥಾಪಕರ ಪರಿಶ್ರಮ ಪ್ರಸ್ತುತ ಸಾರ್ಥಕಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸುವಂತಾಗಲಿ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇನೆ ಎಂದರು.
ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಮಾತನಾಡಿ, ಸಂಸ್ಥಾಪಕರು ಕೊಡುಗೆಯಾಗಿ ನೀಡಿರುವ ಈ ವಿದ್ಯಾಸಂಸ್ಥೆಯನ್ನು ಇಂದು ನಾವುಗಳು ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ವಿದ್ಯಾಸಂಸ್ಥೆಯನ್ನು ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳ, ಸಂಘ-ಸಂಸ್ಥೆಗಳ, ಸರ್ಕಾರ ನೌಕರರು ಹಾಗು ಕ್ಷೇತ್ರದ ಪ್ರತಿಯೊಬ್ಬ ನಾಗರೀಕರ ಸಹಕಾರದಿಂದ ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಸರ್ಕಾರಿ ನೌಕರರ ಮಕ್ಕಳು ಮಾತ್ರವಲ್ಲ, ಮಧ್ಯಮ ಹಾಗು ಬಡ ವರ್ಗ ಸೇರಿದಂತೆ ಸಮಾಜದ ಎಲ್ಲಾ ವರ್ಗದ, ಧರ್ಮದ , ಜಾತಿಯ ಮಕ್ಕಳಿಗೆ ಅತಿಕಡಿಮೆ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾಸಂಸ್ಥೆ ಲಾಭವನ್ನು ಬಯಸದೆ, ನಷ್ಟಕ್ಕೂ ಅವಕಾಶ ನೀಡದೆ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದರು.
ವಿದ್ಯಾಸಂಸ್ಥೆ ಮಹಾಪೋಷಕ ಸಿ.ಎಸ್ ಷಡಾಕ್ಷರಿ, ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಲ್ ಷಡಾಕ್ಷರಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಅನುಸುಧಾ ಮೋಹನ್ ಪಳನಿ, ಪ್ರಮುಖರಾದ ಬಸವಂತಪ್ಪ, ಮಲ್ಲಿಕಾರ್ಜುನ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಹಾಗು ತಾಲೂಕು ಪದಾಧಿಕಾರಿಗಳು, ವಿದ್ಯಾ ಸಂಸ್ಥೆ ಪದಾಧಿಕಾರಿಗಳು, ಆಡಳಿತಾಧಿಕಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್.ಕೆ ಮೋಹನ್ ಸ್ವಾಗತಿಸಿದರು.
ಶಾಲಾ ಮಕ್ಕಳಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲಾ ಮಕ್ಕಳು, ಪೋಷಕರು, ಶಿಕ್ಷಕ ಹಾಗು ಸಿಬ್ಬಂದಿ ವೃಂದದವರು ಪಾಲ್ಗೊಂಡಿದ್ದರು.