ನೂತನ ರಂಗಮಂದಿರ ನಿರ್ಮಾಣಕ್ಕೆ ಒಮ್ಮತದ ತೀರ್ಮಾನ
ಫೆ.೨೩ರಂದು ಶಾಸಕರ ಗೃಹ ಕಚೇರಿಗೆ ಕಲಾವಿದರಿಗೆ ಆಹ್ವಾನ
ಭದ್ರಾವತಿ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಶನಿವಾರ ಕಲಾವಿದರಿಂದ ರಂಗಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸಭೆ ನಡೆಸಲಾಯಿತು.
ಭದ್ರಾವತಿ : ನಗರದಲ್ಲಿ ರಂಗಮಂದಿರ ಪರಿಕಲ್ಪನೆಯಂತೆ ಯಾವುದೇ ಕಟ್ಟಡಗಳು ಇಲ್ಲದಿರುವುದರಿಂದ ಹೊಸ ರಂಗಮಂದಿರ ನಿರ್ಮಿಸುವುದು ಅನಿವಾರ್ಯವಾಗಿದ್ದು, ಈ ಹಿನ್ನಲೆಯಲ್ಲಿ ಅಗತ್ಯವಿರುವ ನಿವೇಶನ ಹಾಗು ಆರ್ಥಿಕ ನೆರವಿಗೆ ಕ್ಷೇತ್ರದ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸಲು ಶನಿವಾರ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಬಹುತೇಕ ಕಲಾವಿದರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ನಗರದಲ್ಲಿ ಸುಸಜ್ಜಿತ ರಂಗಮಂದಿರದ ಅಗತ್ಯತೆ ಹಾಗು ಈ ಸಂಬಂಧ ಗಮನ ಸೆಳೆಯಲು ಕೈಗೊಂಡಿರುವ ಸಾಂಸ್ಕೃತಿಕ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕಲಾವಿದರು, ಕಳೆದ ಸುಮಾರು ೩೦-೩೫ ವರ್ಷಗಳಿಂದ ರಂಗಮಂದಿರ ಬೇಡಿಕೆ ಉಳಿದುಕೊಂಡು ಬಂದಿದೆ. ನಗರದ ಹೃದಯ ಭಾಗದಲ್ಲಿ ಕೋಟ್ಯಾಂತರ ರು. ವೆಚ್ಚದಲ್ಲಿ ನೂತನವಾಗಿನಿರ್ಮಿಸಲಾಗಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ರಂಗಮಂದಿರದ ಕಲ್ಪನೆಯಂತೆ ನಿರ್ಮಾಣಗೊಂಡಿಲ್ಲ. ಈ ಹಿನ್ನಲೆಯಲ್ಲಿ ರಂಗ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ರಾಜ್ಯದ ಇತರೆಡೆಗಳಲ್ಲಿ ನಿರ್ಮಿಸಲಾಗಿರುವ ರಂಗಮಂದಿರಗಳ ಪರಿಕಲ್ಪನೆಯನ್ನು ಇಲ್ಲಿನ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಸುಂದರವಾದ, ಸುಸಜ್ಜಿತವಾದ ರಂಗಮಂದಿರ ನಿರ್ಮಿಸಲು ಸುಮಾರು ೮೦*೮೦ ಚುತುರ ಅಡಿ ಅಳತೆ ವಿಸ್ತೀರ್ಣದ ಜಾಗದ ಅವಶ್ಯಕತೆ ಇದೆ. ಈ ಸಂಬಂಧ ಶಾಸಕರನ್ನು ಸಂಪರ್ಕಿಸಿ ಮನವಿ ಸಲ್ಲಿಸುವಂತೆ ಕೆಲವರು.
ಇನ್ನೂ ಕೆಲವರು ವಿಐಎಸ್‌ಎಲ್ ಕಾರ್ಖಾನೆಗೆ ಸೇರಿರುವ ಶಾರದ ಮಂದಿರ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಖಾನೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಲಹೆ ವ್ಯಕ್ತಪಡಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ರಂಗ ಕಲಾವಿದರು ಸೇರಿದಂತೆ ವಿವಿಧ ಪ್ರಾಕಾರಗಳ ಕಲಾವಿದರು ಸಲಹೆ, ಸೂಚನೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಅಂತಿಮವಾಗಿ ಸಭೆಯಲ್ಲಿ ನೂತನ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ನಿವೇಶನ ಹಾಗು ಆರ್ಥಿಕ ನೆರವು ನೀಡುವಂತೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಸಂಪರ್ಕಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಅಲ್ಲದೆ ಸಭೆ ಸ್ಥಳದಿಂದಲೇ ಶಾಸಕರನ್ನು ಮೊಬೈಲ್ ಮೂಲಕ ಸಂಪರ್ಕಿಸಲಾಯಿತು. ಶಾಸಕರು ಪೂರಕವಾಗಿ ಸ್ಪಂದಿಸುವ ಜೊತೆಗೆ ಈ ಸಂಬಂಧ ಚರ್ಚಿಸಲು ಸೋಮವಾರ ತಮ್ಮ ಗೃಹ ಕಚೇರಿಗೆ ಆಗಮಿಸುವಂತೆ ಆಹ್ವಾನಿಸಿದರು.
ಕಲಾವಿದರಾದ ತಮಟೆ ಜಗದೀಶ್, ದಿವಾಕರ್, ಎನ್. ಬಾಬು, ಎಂ.ಆರ್ ರೇವಣಪ್ಪ, ಕಮಲಕರ್, ಕೆ.ಬಸಪ್ಪ, ಕದರಿ ನರಸಿಂಹಯ್ಯ, ವೈ.ಕೆ.ಹನುಮಂತಯ್ಯ, ರವಿಕುಮಾರ್, ಅಪೇಕ್ಷಾ ಮಂಜುನಾಥ್, ಹರೋನಹಳ್ಳಿ ಸ್ವಾಮಿ, ಮಂಜುನಾಥ್, ವರದರಾಜ್, ಜೆ.ಎನ್ ಬಸವರಾಜಪ್ಪ, ನಂದಿನಿ ಮಲ್ಲಿಕಾರ್ಜುನ್, ಕಮಲಾ, ಗಜೇಂದ್ರ, ಅಡವೀಶಯ್ಯ, ನರಸಿಂಹಾಚಾರ್, ಮೋಹನ್‌ಕುಮಾರ್, ರಾಜು, ನಾಗೇಂದರಪ್ಪ, ನಂದಕುಮಾರ್, ಕೃಷ್ಣಪ್ಪ, ಜ್ಯೋತಿ, ಪಂಕಜ, ರಾಜಶೇಖರ, ಹರೀಶ್, ಆದಿತ್ಯ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
.jpeg)