ಉಕ್ಕಿನ ನಗರದಲ್ಲಿ ಕಣ್ಮನ ಸೆಳೆದ `ಪ್ರೇಮ ಪ್ರವಾಹಿನಿ ರಥಯಾತ್ರೆ'

ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಸಂಭ್ರಮಾಚರಣೆ ಅಂಗವಾಗಿ ದೇಶದಾದ್ಯಂತ ಸಂಚರಿಸುತ್ತಿರುವ `ಪ್ರೇಮ ಪ್ರವಾಹಿನಿ ರಥಯಾತ್ರೆ'ಯು ಶನಿವಾರ ಭದ್ರಾವತಿ ನಗರಕ್ಕೆ ಆಗಮಿಸಿತು. ರಥಯಾತ್ರೆಯಲ್ಲಿ ವಿವಿಧ ಕಲಾತಂಡಗಳು, ಸ್ತಬ್ಧಚಿತ್ರಗಳು, ಶಾಲಾ ಮಕ್ಕಳು, ಭಕ್ತರು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. 
    ಭದ್ರಾವತಿ : ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಸಂಭ್ರಮಾಚರಣೆ ಅಂಗವಾಗಿ ದೇಶದಾದ್ಯಂತ ಸಂಚರಿಸುತ್ತಿರುವ `ಪ್ರೇಮ ಪ್ರವಾಹಿನಿ ರಥಯಾತ್ರೆ'ಯು ಶನಿವಾರ ನಗರಕ್ಕೆ ಆಗಮಿಸಿತು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಸೇರಿದಂತೆ ಇನ್ನಿತರರು ಅದ್ದೂರಿಯಾಗಿ ಸ್ವಾಗತಿಸಿದರು.
    ರಥಯಾತ್ರೆ ಬೆಳಿಗ್ಗೆ ಹಳೇನಗರದ ಕನಕಮಂಟಪದಿಂದ ಪ್ರಾರಂಭಗೊಂಡು ಡಾ. ಪುನೀತ್ ರಾಜಕುಮಾರ್ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಡಾ. ರಾಜಕುಮಾರ್ ರಸ್ತೆ, ಹಾಲಪ್ಪ ವೃತ್ತ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ ಮೂಲಕ ವಿಐಎಸ್‌ಎಲ್ ಡಬ್ಬಲ್ ರಸ್ತೆ ಮೂಲಕ ಮಧ್ಯಾಹ್ನ ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾಕ್ಷೇತ್ರಕ್ಕೆ ತಲುಪಿತು. 
    

    ಬೃಹತ್ ರಥಯಾತ್ರೆಯಲ್ಲಿ ಡೊಳ್ಳು ಮತ್ತು ವೀರಗಾಸೆ ಹಾಗು ತಮಟೆ ತಲಾ ಎರಡು ತಂಡಗಳು, ಕೋಲಾಟ, ಮಂಗಳವಾದ್ಯ, ಕಹಳೆ, ಯಕ್ಷಗಾನ, ಗೊಂಬೆ ಆಟ ಸೇರಿದಂತೆ ೧೨ ಕಲಾತಂಡಗಳು ಭಾಗವಹಿಸಿದ್ದವು. ದಶವತಾರ, ಶ್ರೀಕೃಷ್ಣ ಅರ್ಜುನಿಗೆ ಗೀತೋಪದೇಶ, ಏಸು ಕ್ರಿಸ್ತನ ಆರಾಧನೆ, ಕನಕದಾಸರು ಸೇರಿದಂತೆ ದಾರ್ಶನಿಕರು, ಸ್ವಾಮಿ ವಿವೇಕಾನಂದ ಹಾಗು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಕುರಿತ ಸ್ತಬ್ಧಚಿತ್ರಗಳು ಗಮನ ಸೆಳೆದವು. 
    ನಗರದ ಕನಕ ವಿದ್ಯಾಸಂಸ್ಥೆ, ವಿವೇಕಾನಂದ ವಿದ್ಯಾಸಂಸ್ಥೆ, ಅನನ್ಯ ಶಿಕ್ಷಣ ಸಂಸ್ಥೆ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ, ಅಕ್ಕ ಮಹಾದೇವಿ ಶಿಕ್ಷಣ ಸಂಸ್ಥೆ, ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ, ಬಸವೇಶ್ವರ ವಿದ್ಯಾಸಂಸ್ಥೆ, ಸೇಂಟ್ ಮೇರಿಸ್ ವಿದ್ಯಾಸಂಸ್ಥೆ ಹಾಗು ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಒಟ್ಟು ೧೦ ಶಿಕ್ಷಣ ಸಂಸ್ಥೆಗಳ ಶಾಲಾ ಮಕ್ಕಳು, ಮಹಿಳಾ ಸಂಘಗಳ ಸದಸ್ಯರು, ಬಾಲವಿಕಾಸ ಮಕ್ಕಳು, ಭಕ್ತರು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ರಥಯಾತ್ರೆ ನೋಡುಗರ ಕಣ್ಮನ ಸೆಳೆಯಿತು. 
 

    ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಸ್ವಾಮಿಯವರ ಪಾದುಕೆಯ ದರ್ಶನ ಮತ್ತು ಸ್ಪರ್ಶನಕ್ಕೆ ಸಂಸ್ಥೆಯ ವತಿಯಿಂದ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಹಾಗು ಪ್ರಶಾಂತಿ ಸೇವಾ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.