ಹಂತ ಹಂತವಾಗಿ ಬಿ.ಎಚ್ ರಸ್ತೆ ಅಭಿವೃದ್ಧಿ ಕಾರ್ಯ : ಕವಲಗುಂದಿ ಕಿರುಸೇತುವೆ ನೆಲಸಮ

ಭದ್ರಾವತಿ ಬಿಳಕಿ ವೃತ್ತದಿಂದ ಕೈಗೊಂಡಿರುವ ದ್ವಿಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಕವಲಗುಂದಿ(ಲೋಯರ್ ಹುತ್ತಾ)ವರೆಗೂ ಸಾಗಿದೆ. ಭದ್ರಾ ನದಿಗೆ ಸಂಪರ್ಕಗೊಂಡಿರುವ ಹಳೇಯ ಕಿರು ಸೇತುವೆ ನೆಲಸಮಗೊಳಿಸಿ ಹೊಸದಾಗಿ ರಸ್ತೆಯ ಅಳತೆಗೆ ತಕ್ಕಂತೆ ದೊಡ್ಡ ಸೇತುವೆ ನಿರ್ಮಿಸಲಾಗುತ್ತಿದೆ. 
    ಭದ್ರಾವತಿ: ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಬಿ.ಎಚ್ ರಸ್ತೆಯನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಕಳೆದ ಕೆಲವು ತಿಂಗಳಿನಿಂದ ಬಿಳಕಿ ವೃತ್ತದಿಂದ ಕೈಗೊಂಡಿರುವ ದ್ವಿಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಕವಲಗುಂದಿ(ಲೋಯರ್ ಹುತ್ತಾ)ವರೆಗೂ ಸಾಗಿದೆ. ಭದ್ರಾ ನದಿಗೆ ಸಂಪರ್ಕಗೊಂಡಿರುವ ಹಳೇಯ ಕಿರು ಸೇತುವೆ ನೆಲಸಮಗೊಳಿಸಿ ಹೊಸದಾಗಿ ರಸ್ತೆಯ ಅಳತೆಗೆ ತಕ್ಕಂತೆ ದೊಡ್ಡ ಸೇತುವೆ ನಿರ್ಮಿಸಲಾಗುತ್ತಿದೆ. 
    ಶಿವಮೊಗ್ಗ-ಭದ್ರಾವತಿ ನಡುವಿನ ಪ್ರಮುಖ ಸಂಪರ್ಕಕೊಂಡಿಯಾಗಿರುವ ಬಿ.ಎಚ್ ರಸ್ತೆಯನ್ನು ಸುಮಾರು ಎರಡು ದಶಕಗಳಿಂದ ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ನಡುವೆ ಈ ರಸ್ತೆಯಲ್ಲಿ ಹೊಸದಾಗಿ ಕಡದಕಟ್ಟೆ ಬಳಿ ರೈಲ್ವೆ ಇಲಾಖೆಯಿಂದ ಹೊಸ ಸೇತುವೆ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿದೆ. ಮತ್ತೊಂದೆಡೆ ಹಳೇಸೇತುವೆ(ಭದ್ರಾ ಸೇತುವೆ)ಬಳಿ ಹೊಸದಾಗಿ `ವಿಶ್ವಕರ್ಮ ಶಿಲ್ಪಿ ಅಮರ ಶಿಲ್ಪಿ ಜಕಣಾಚಾರಿ ಸೇತುವೆ'(ಕಮಾನು ಸೇತುವೆ) ಈಗಾಗಲೇ ನಿರ್ಮಾಣಗೊಂಡು ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. 
    ಈ ನಡುವೆ ನಗರದ ಪ್ರಮುಖ ಸ್ಥಳಗಳಲ್ಲಿ ಬಿ.ಎಚ್ ರಸ್ತೆಯನ್ನು ಮತ್ತಷ್ಟು ಅಗಲೀಕರಣಗೊಳಿಸುವ ಕಾರ್ಯ ನಡೆಯಬೇಕಿದೆ. ಮುಂದಿನ ೨-೩ ವರ್ಷಗಳಲ್ಲಿ ಬಿ.ಎಚ್ ರಸ್ತೆ ಸಂಪೂರ್ಣವಾಗಿ ಅಭಿವೃದ್ಧಿಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.