ಬಿಪಿಎಲ್ ಕಾರ್ಡ್ ರದ್ದು : ಬಡ ವರ್ಗದವರು ಬೀದಿಪಾಲು
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ, ಪ್ರತಿಭಟನೆ
ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವುದನ್ನು ವಿರೋಧಿಸಿ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಶುಕ್ರವಾರ ಬಿಜೆಪಿ ಪಕ್ಷದ ನಗರ ಮತ್ತು ಗ್ರಾಮಾಂತರ ಮಂಡಲ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ರಾಜ್ಯ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ. ಬಡ ವರ್ಗದವರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ. ಬಡವರು ತಿನ್ನುವ ಅನ್ನವನ್ನು ಕಸಿಯುತ್ತಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಆರೋಪಿಸಿದರು.
ಅವರು ಶುಕ್ರವಾರ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವುದನ್ನು ವಿರೋಧಿಸಿ ತಾಲೂಕು ಕಛೇರಿ ಮುಂಭಾಗ ಪಕ್ಷದ ನಗರ ಮತ್ತು ಗ್ರಾಮಾಂತರ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದರು.
ಬಡ ವರ್ಗದವರಿಗೆ ರಾಜ್ಯ ಸರ್ಕಾರ ವಿನಾಕಾರಣ ಕಿರುಕುಳ ನೀಡುತ್ತಿದ್ದು, ಅಸಂಬದ್ಧ, ಅವೈಜ್ಞಾನಿಕ ಮಾನದಂಡದ ಮೂಲಕ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿರುವುದು ಖಂಡನೀಯ. ಬಡ ವರ್ಗದವರಿಗೆ ಪ್ರತಿಯೊಂದಕ್ಕೂ ಬಿಪಿಎಲ್ ಕಾರ್ಡ್ ಅತಿ ಅವಶ್ಯಕವಾಗಿದೆ. ಏಕಾಏಕಿ ಕಾರ್ಡ್‌ಗಳನ್ನು ರದ್ದುಪಡಿಸಿರುವುದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ಅಸಂಬದ್ಧ, ಅವೈಜ್ಞಾನಿಕ ಮಾನದಂಡಗಳನ್ನು ಕೈಬಿಟ್ಟು ನಿಜವಾದ ಫಲಾನುಭವಿಗಳನ್ನು ಗುರುತಿಸಿ ಬಿಪಿಎಲ್ ಕಾರ್ಡ್‌ಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಮಾತನಾಡಿ, ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಪ್ರತಿಯೊಬ್ಬ ನಾಗರೀಕನ ಅಸ್ತಿತ್ವದ ಗುರುತುಗಳಾಗಿವೆ. ಇಂದು ಅಂತ್ಯೋದಯ, ಬಿಪಿಎಲ್ ಕಾರ್ಡ್ ಕೇವಲ ನ್ಯಾಯಬೆಲೆ ಅಂಗಡಿಯಲ್ಲಿ ದೊರಕುವ ಅಕ್ಕಿ, ಗೋಧಿ, ಸಕ್ಕರೆ ಇತ್ಯಾದಿ ದಿನಸಿ ಸಾಮಾನುಗಳ ಖರೀದಿಗೆ ಮಾತ್ರವಲ್ಲದೆ, ಇಂದಿನ ದುಬಾರಿ ಆರೋಗ್ಯ ವೆಚ್ಚದ ಸಂದರ್ಭದಲ್ಲಿ, ಆಸ್ಪತ್ರೆಗಾಗಿಯೂ ಕೂಡ ಬಿಪಿಎಲ್ ಕಾರ್ಡ್ ಅತ್ಯಂತ ಅಗತ್ಯ ದಾಖಲೆಯಾಗಿದೆ. ಆದರೆ ಇಂದು ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದಾರೆ, ಜಿಎಸ್‌ಟಿ ರಿಜಿಸ್ಟ್ರೇಷನ್ ಮಾಡಿಸಿದ್ದಾರೆ, ಕುಟುಂಬದ ಯಾವುದೋ ಒಬ್ಬ ಸದಸ್ಯ ಮನೆ ತೊರೆದು ಬೇರೆಡೆ ವಾಸವಾಗಿದ್ದು, ಆತನ ಆದಾಯವನ್ನು ಕೂಡ ಪರಿಗಣಿಸಿ ಬಿಪಿಎಲ್ ಕಾರ್ಡನ್ನು ಎಪಿಎಲ್ ಕಾರ್ಡ್‌ಗೆ ಪರಿವರ್ತಿಸುತ್ತಿರುವ ಕಾರಣ, ನೈಜವಾಗಿ ಬಿಪಿಎಲ್ ಕಾರ್ಡ್ ಹೊಂದಬೇಕಾಗಿರುವ ನೈಜ ಫಲಾನುಭವಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ರಘುರಾವ್, ಶಕುಂತಲ, ಎಂ. ಮಂಜುನಾಥ್, ಅನ್ನಪೂರ್ಣ ಸೇರಿದಂತೆ ಇನ್ನಿತರರು ಮಾತನಾಡಿ, ಸರ್ಕಾರ ಈಗಾಗಲೇ ಬಿಪಿಎಲ್ ಕಾರ್ಡಿನಲ್ಲಿ ಏನಾದರೂ ದೋಷಗಳಿದ್ದಲ್ಲಿ ನೈಜ ಫಲಾನುಭವಿಗಳಿಗೆ ಅವಕಾಶ ನೀಡಿ ಸರಿಪಡಿಸಿಕೊಳ್ಳಲು ತಕ್ಷಣ ಅವಕಾಶ ಮಾಡಿಕೊಡಬೇಕು. ಯಾವುದೋ ಕಾರಣಕ್ಕೆ ಟಿಡಿಎಸ್ ರಿಫಂಡ್ ಅಥವಾ ಮನೆ ಕಟ್ಟಿಕೊಳ್ಳಲು ಲೋನ್ ಉದ್ದೇಶಕ್ಕೆ ಐಟಿ ರಿಟರ್ನ್ ಫೈಲ್ ಮಾಡಿರುವ ನಿಜವಾದ ಬಡವನ ಬಿಪಿಎಲ್ ಕಾರ್ಡ್ ರದ್ದುಪಡಿಸಬಾರದು. ಕೇವಲ ಜಿಎಸ್‌ಟಿ ರಿಜಿಸ್ಟ್ರೇಷನ್ ಅದರದ ಮೇಲೆ ಬಿಪಿಎಲ್ ಕಾರ್ಡ್ ರದ್ದುಪಡಿಸಬಾರದು. ಕೆಲವರು ಕಾರು ಸೇರಿದಂತೆ ಇತರೆ ವಾಹನಗಳನ್ನು ಸ್ವಯಂ ಉದ್ಯೋಗಕ್ಕಾಗಿ ಸಾಲ ಮಾಡಿ ಕೊಂಡುಕೊಂಡಿರುತ್ತಾರೆ. ಆ ರೀತಿಯ ಸಂದರ್ಭದಲ್ಲಿ ಕೇವಲ ಕಾರು, ಇತರೆ ವಾಣಿಜ್ಯ ಕಾರಣದ ವಾಹನ, ಜಿಎಸ್‌ಟಿ ರಿಜಿಸ್ಟ್ರೇಷನ್ ಇತ್ಯಾದಿಗಳ ನೆಪ ಹೇಳಿ ಅಥವಾ ಕಾರಣ ನೀಡಿ ಅಂತಹ ಬಡವನ ಬಿಪಿಎಲ್ ಕಾರ್ಡನ್ನು ಕೂಡ ರದ್ದುಪಡಿಸಬಾರದು. ಈ ರೀತಿ ನೈಜ ಬಡವನ ಬಿಪಿಎಲ್ ಕಾರ್ಡ್ ರದ್ದಾಗದೇ ಇರುವ ಹಾಗೆ ನಿಜವಾದ ಆರ್ಥಿಕ ಸಮೀಕ್ಷೆ ನಡೆಸುವುದರ ಮೂಲಕ ಕಾರ್ಡ್ ಉಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ರಾಜ್ಯ ಸರ್ಕಾರ ಮಾಡಬೇಕಾಗಿ ಆಗ್ರಹಿಸಿದರು.
ನಗರದಲ್ಲಿ ೨೮ ಮೇ ೨೦೧೮ ರಂದು ಪ್ರಧಾನಮಂತ್ರಿ ಅವಾಸ್ ಯೋಜನೆ(ಸರ್ವರಿಗೂ ಸೂರು ಯೋಜನೆ)ಯಡಿ ೫೦೦ ಫಲಾನುಭವಿಗಳಿಗೆ ಮನೆಗಳು ಮಂಜೂರಾಗಿದ್ದು, ಆದರೆ ಇದುವರೆಗೂ ಸುಮಾರು ೧೦೭ ಮನೆಗಳನ್ನು ಮಾತ್ರ ಪೂರ್ಣವಾಗಿ ನಿರ್ಮಾಣಗೊಳಿಸಲಾಗಿದ್ದು, ಮನೆಗಳ ನಿರ್ಮಾಣ ಕಾರ್ಯದಲ್ಲಿ ಸರ್ಕಾರ ದಿವ್ಯ ನಿರ್ಲಕ್ಷ್ಯವಹಿಸಿರುವ ಕಾರಣ ಬಡವರಿಗೆ ಸೂರು ದೊರಕದಂತಾಗಿದೆ ಎಂದು ದೂರಿದರು. ಈ ಸಂಬಂಧ ಗಮನಹರಿಸಿ ಫಲಾನುಭವಿಗಳಿಗೆ ತಕ್ಷಣ ಸೂರು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ಚನ್ನೇಶ್, ಮೊಸರಹಳ್ಳಿ ಅಣ್ಣಪ್ಪ, ಹನುಮಂತನಾಯ್ಕ, ಸರಸ್ವತಿ, ಎಸ್. ರಾಜಶೇಖರ ಉಪ್ಪಾರ, ಸುಬ್ರಮಣ್ಯ, ಧನುಷ್ ಬೋಸ್ಲೆ, ಪ್ರಸನ್ನ, ಎಂ.ಎಸ್ ಸುರೇಶಪ್ಪ, ನಾಗವೇಣಿ, ನಿರಂಜನ, ಆಶಾ ಪುಟ್ಟಸ್ವಾಮಿ, ಭರತ್ ಕುಮಾರ್, ಪ್ರಜ್ವಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಪ್ರತಿಭಟನೆಗೂ ಮೊದಲು ಹಾಲಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಹಾಕಲಾಯಿತು.