ಉಕ್ಕಿನ ನಗರಕ್ಕೆ ರಂಗಮಂದಿರ : ಫೆ.೨೧ರಂದು ಕಲಾವಿದರ ಸಭೆ

    ಭದ್ರಾವತಿ: ಒಂದು ಕಾಲದಲ್ಲಿ ರಂಗಭೂಮಿ ಕಲಾವಿದರ ನೆಲೆಯಾಗಿದ್ದ, ಸಾವಿರಾರು ಕಲಾವಿದರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿರುವ ಉಕ್ಕಿನ ನಗರದಲ್ಲಿ ಇದುವರೆಗೂ ರಂಗಕಲಾವಿದರು ತಮ್ಮ ಚಟುವಟಿಕೆಗಳನ್ನು ನಡೆಸಲು ತಮ್ಮದೇ ಆದ ಸೂಕ್ತ ಸ್ಥಳವಾಗಲಿ, ರಂಗಮಂದಿರವಾಗಲಿ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಇದೀಗ ರಂಗಮಂದಿರ ನಿರ್ಮಿಸುವಂತೆ ಒತ್ತಾಯಿಸುವ ಉದ್ದೇಶದಿಂದ ಸಮಾನ ಮನಸ್ಸಿನ ರಂಗಭೂಮಿ ಹಾಗು ಎಲ್ಲಾ ಪ್ರಕಾರಗಳ ಕಲಾವಿದರು ಒಗ್ಗಟ್ಟಾಗಿ ಅಭಿಯಾನ ನಡೆಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಭಿಯಾನದ ಮೊದಲ ಸಭೆ ಫೆ.೨೧ರ ಶನಿವಾರ ಬೆಳಿಗ್ಗೆ ೧೦.೩೦ಕ್ಕೆ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಸಭೆ ಕರೆಯಲಾಗಿದೆ.
    ಈ ಹಿಂದೆ ಸುಮಾರು ೫೦ ರಿಂದ ೬೦ ರಂಗ ತಂಡಗಳು ಹಾಗು ೫೦ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಸಕ್ರಿಯವಾಗಿದ್ದವು. ಆದರೆ ಕಾಲಾನಂತರದಲ್ಲಿ ಒಂದೊಂದೇ ಕಲಾ ತಂಡಗಳು ಕಣ್ಮರೆಯಾಗಿವೆ. ಇದಕ್ಕೆ ಪೂರಕವೆಂಬಂತೆ ರಂಗಮಂದಿರ ಇಲ್ಲದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಜನರಲ್ಲಿ ಕಲೆಯಲ್ಲಿ ಆಸಕ್ತಿ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಈ ನಡುವೆ ಇದೀಗ ಇಂದಿನ ತಲೆಮಾರಿಗೆ ರಂಗ ಚಟುವಟಿಕೆಗಳನ್ನು ಪರಿಚಯಿಸುವ ಹಾಗು ರಂಗಭೂಮಿ ತನ್ನ ಹಳೆಯ ವೈಭವ ಮರಳಿ ಪಡೆಯುವ ಉದ್ದೇಶದಿಂದ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಅಭಿಯಾನ ಆರಂಭಿಸಲಾಗಿದೆ.
    ಎಲ್ಲಾ ಪ್ರಕಾರದ ಕಲಾವಿದರು, ರಂಗ ತಂಡಗಳು ಮೊದಲ ಸಭೆಗೆ ಆಗಮಿಸಿ ಸಲಹೆ, ಸೂಚನೆ ಹಾಗು ಮಾರ್ಗದರ್ಶನ ನೀಡುವ ಮೂಲಕ ಸಹಕರಿಸುವಂತೆ ಜಾನಪದ ಕಲಾವಿದರಾದ ತಮಟೆ ಜಗದೀಶ್ ಹಾಗು ದಿವಾಕರ್ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಮಟೆ ಜಗದೀಶ್-೯೯೪೫೨೫೫೭೫೪ ಅಥವಾ ಕೆ.ಎಸ್ ರವಿಕುಮಾರ್-೮೪೯೬೯೦೧೩೫೫ ಅಥವಾ ಜಿ. ದಿವಾಕರ-೯೦೩೬೬೮೧೦೯೨ ಸಂಪರ್ಕಿಸಬಹುದಾಗಿದೆ.