ಮಹಿಳಾ ಸಂಘ-ಸಂಸ್ಥೆಗಳನ್ನು ತಮ್ಮ ಮನೆಯಂತೆ ಭಾವಿಸಿ : ಫಾದರ್ ಲ್ಯಾನ್ಸಿ ಡಿಸೋಜಾ

ಭದ್ರಾವತಿ ನ್ಯೂಟೌನ್ ಕರುಣಾ ಸೇವಾ ಕೇಂದ್ರ ಹಾಗೂ ಕರುಣಾ ಮಹಿಳಾ ಮಂಡಳಿಗಳ ಒಕ್ಕೂಟಗಳ ಆಶ್ರಯದಲ್ಲಿ ಸೈಂಟ್ ಚಾರ್ಲ್ಸ್ ಶಾಲಾ ಆವರಣದಲ್ಲಿ ಶನಿವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. 
    ಭದ್ರಾವತಿ : ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತಂದು ಗುರುತಿಸಿಕೊಳ್ಳಲು ನೆರವಾಗುತ್ತಿರುವ ಸಂಘ-ಸಂಸ್ಥೆಗಳನ್ನು ಮಹಿಳೆಯರು ತಮ್ಮ ಮನೆಯಂತೆ ಕಾಣಬೇಕು. ಇಂತಹ ಸಂಘ-ಸಂಸ್ಥೆಗಳು ಬೆಳೆದರೆ ಮಹಿಳೆಯರು ಬೆಳೆದಂತೆ ಎಂದು ನ್ಯೂಟೌನ್ ಅಮಲೋಧ್ಭವಿ ಮಾತೆ ಧರ್ಮಕೇಂದ್ರದ ಗುರುಗಳಾದ ಫಾದರ್ ಲ್ಯಾನ್ಸಿ ಡಿಸೋಜಾ ಹೇಳಿದರು.
    ಅವರು ಶನಿವಾರ ಕರುಣಾ ಸೇವಾ ಕೇಂದ್ರ ಹಾಗೂ ಕರುಣಾ ಮಹಿಳಾ ಮಂಡಳಿಗಳ ಒಕ್ಕೂಟಗಳ ಆಶ್ರಯದಲ್ಲಿ ಸೈಂಟ್ ಚಾರ್ಲ್ಸ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. 
     ಕೆಟ್ಟ ವಿಚಾರವನ್ನು ಬಿಟ್ಟುಬಿಡೋಣ. ಸಂಘ-ಸಂಸ್ಥೆಗಳೆಂದ ಮೇಲೆ ಕೆಟ್ಟದ್ದು, ಒಳ್ಳೆಯದು ಇದ್ದೇ ಇರುತ್ತದೆ. ನಮ್ಮನ್ನು ಬೆಳೆಸುವ ಸಂಘ-ಸಂಸ್ಥೆಗಳ ವಿಚಾರವಾಗಿ ಒಳ್ಳೆಯದನ್ನೆ ಮಾತನಾಡೋಣ, ಒಳ್ಳೆಯದನ್ನೇ ಮಾಡೋಣ. ಇಲ್ಲಿ ಯಾರು ಪರಿಪೂರ್ಣರಲ್ಲ. ಎಲ್ಲರೂ ಬದಲಾಗಬೆಕು ಎಂದರು. 
    ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ  ಮುಂದಿದ್ದಾರೆ. ಅಂತೆಯೆ ಕುಟುಂಬ ನಿರ್ವಹಣೆಯಲ್ಲಿಯೂ ಅವರ ಪಾತ್ರ ಗಣನೀಯ. ಹೆಚ್ಚು ಮಾತಿನಿಂದ ಜಗಳ ಉಲ್ಬಣವಾಗುತ್ತವೆ. ಆದ್ದರಿಂದ ಮಹಿಳೆಯರು ಮಾತಿಗೆ ಮಾತು ಕೊಡದೆ ಮಾತು ಕಡಿಮೆ ಮಾಡಿದರೇ ಒಳಿತು ಎಂದರು.  
    ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭಾ ಮರವಂತೆ ಮಾತನಾಡಿ, ಮಹಿಳೆಯರು ಹಲವು ವಿಚಾರಗಳಲ್ಲಿ ಶಕ್ತರಾಗಲು, ಸಬಲೀಕರಣಗೊಳ್ಳಲು, ದೌರ್ಬಲ್ಯ, ಕುಂದುಕೊರತೆ ನೀಗಿಸಲು ಮಹಿಳಾ ಸಂಘಟನೆಗಳ ಅವಶ್ಯಕತೆ ಇದೆ. ಮಹಿಳೆಯರು ದೊಡ್ಡ ವೇದಿಕೆಗಳಲ್ಲಿ ಮುಂದೆ ಬರುವಂತಾಗಬೇಕು. ಸಮಾಜ ಕಟ್ಟುವ ಶಕ್ತಿ ಹೆಣ್ಣಿಗಿದೆ. ಹೆಣ್ಣು ಒಲಿದರೆ ನಾರಿ, ಮುನಿದರೆ ಗಂಡು ಪರಾರಿ. ಸಮಾಜದ ಸಂಸ್ಕೃತಿ ಬೆಳೆಸುವಲ್ಲಿ, ಕಾಪಾಡುವಲ್ಲಿ ಹೆಣ್ಣು ಅತಿ ಮುಖ್ಯ ಪಾತ್ರವಹಿಸಿದ್ದಾಳೆ. ಜಗತ್ತು ಬೆಳೆಯಬೇಕು, ಮುಂದುವರೆಯಬೇಕು ಎಂದರೆ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಳವಾಗಬೇಕು. ತ್ಯಾಗ, ಪ್ರೀತಿ, ಸಹನೆ, ಸಂಯಮಕ್ಕೆ, ಮನೆಯಲ್ಲಿ ವೃದ್ಧರನ್ನು ನೋಡಿಕೊಳ್ಳಲು ಹೆಣ್ಣು ಮಗು ಬೇಕು ಎಂದರು. 
    ಮಾರ್ಚ್ ೮ ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಎಲ್ಲೆಡೆ ಆಚರಿಸಲಾಗುವುದು. ಆ ಸಮಯದಲ್ಲಿ ಮುಸಲ್ಮಾನ ಮಹಿಳೆಯರು ಉಪವಾಸದ ದಿನಗಳನ್ನು ಆಚರಿಸುವುದರಿಂದ ಯಾರಿಗೂ ಯಾವುದರಲ್ಲಿಯೂ ಕೊರತೆಯಾಗಬಾರದೆಂದು ಒಕ್ಕೂಟದ ನಿರ್ದೇಶಕಿ ಸಿಸ್ಟರ್ ಎಲೆನ್ ಮೊರಸ್ ಇಂದು ಒಂದು ತಿಂಗಳ ಮುಂಚಿತವಾಗಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು. 
    ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಸಂಧ್ಯಾ ಕಾವೇರಿ, ವೈದ್ಯಕೀಯ, ಸಾಮಾಜಿಕ ಮತ್ತು ಪಾಲನಾ ಸಲಹೆಗಾರರಾದ ಸಿಸ್ಟರ್ ವಿನ್ಸಿ ಸೆಬಾಸ್ಟಿಯನ್ ಮತ್ತು ಕರುಣಾ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಧನಲಕ್ಷ್ಮಿ ಮಾತನಾಡಿದರು. 
    ನ್ಯೂಟೌನ್ ಸೈಂಟ್ ಚಾರ್ಲ್ಸ್ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಸಿಸ್ಟರ್ ಎಲಿಜಬೆತ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ನಿರ್ಮಲ ಆಸ್ಪತ್ರೆ ಉಪ ವ್ಯವಸ್ಥಾಪಕಿಯರಾದ ಸಿಸ್ಟರ್ ಬರ್ನಿ,  ಸಿಸ್ಟರ್, ಡಾ. ರಜೀನಾ, ಸಿಸ್ಟರ್ ತೆರೇಸಾ ಡಿಕಾಸ್ಟ, ಸಿಸ್ಟರ್ ಪ್ರಭಾ, ಸಿಸ್ಟರ್ ಆಡ್ಲಿನ್, ಸಿಸ್ಟರ್ ಸಿಲ್ವಿಯ, ಉದ್ಯಮಿ ಬಿ.ಕೆ ಜಗನ್ನಾಥ್, ಕಾರ್ಯಕರ್ತೆಯರಾದ ಧನಲಕ್ಷ್ಮಿ, ಸಾವಿತ್ರಿ, ಮೇರಿ ಉಪಸ್ಥಿತರಿದ್ದರು. 
ಮಹಿಳಾ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುದವು. ಸುಪ್ರಿಯ ನಿರೂಪಿಸಿ, ಕರುಣಾ ಸೇವಾ ಕೇಂದ್ರದ ಮಹಿಳಾ ಒಕ್ಕೂಟಗಳ ನಿರ್ದೇಶಕಿ ಸಿಸ್ಟರ್ ಹೆಲೆನ್ ಮೊರಾಸ್ ಸ್ವಾಗತಿಸಿದರು, ಧನಲಕ್ಷ್ಮಿ ವಂದಿಸಿದರು.