ತಾಯಿಯ ಅಂತ್ಯಕ್ರಿಯೆಗೆ ತೆರಳಿದ್ದ ಮಗಳ ಮನೆಯಲ್ಲಿ ಸುಮಾರು ೭.೪೪ ಲಕ್ಷ ರು. ಚಿನ್ನಾಭರಣ, ನಗದು ಕಳ್ಳತನ

    ಭದ್ರಾವತಿ : ಅನಾರೋಗ್ಯದಿಂದ ಮೃತಪಟ್ಟಿದ್ದ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಮಗಳ ಮನೆಯಲ್ಲಿ ಲಕ್ಷಾಂತರ ರು. ಚಿನ್ನಾಭರಣ ಹಾಗು ನಗದು ಕಳ್ಳತನ ಮಾಡಿರುವ ಘಟನೆ ನಗರಸಭೆ ವ್ಯಾಪ್ತಿಯ ಹೊಸ ಸಿದ್ದಾಪುರ ಎನ್‌ಟಿಬಿ ಬಡಾವಣೆಯಲ್ಲಿ ನಡೆದಿದೆ. 
    ಎನ್‌ಟಿಬಿ ಬಡಾವಣೆ ನಿವಾಸಿ ಎಸ್. ಸರೋಜ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕಾಗದನಗರದಲ್ಲಿ ವಾಸವಾಗಿರುವ ಸರೋಜರವರ ತಾಯಿ ಲಕ್ಷ್ಮಮ್ಮ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಈ ಹಿನ್ನಲೆಯಲ್ಲಿ ಫೆ.೯ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಮಗ ಪ್ರೇಮ್ ಕುಮಾರ್ ಜೊತೆ ದ್ವಿಚಕ್ರ ವಾಹನದಲ್ಲಿ ಸರೋಜರವರು ಕಾಗದನಗರಕ್ಕೆ ಬಂದಿದ್ದು, ಅಂತ್ಯಕ್ರಿಯೆ ಮುಗಿಸಿಕೊಂಡು ಪ್ರೇಮ್‌ಕುಮಾರ್ ರಾತ್ರಿ ಮನೆಗೆ ಹಿಂದಿರುಗಿದಾಗ ಮನೆಯ ಬಾಗಿಲಿನ ಬೀಗ ಮುರಿದಿರುವುದು ಕಂಡು ಬಂದಿದೆ. ತಕ್ಷಣ ಮಾಹಿತಿಯನ್ನು ತಾಯಿ ಸರೋಜರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದು, ಮತ್ತೊಬ್ಬ ಮಗ ಹರೀಶ್ ಜೊತೆ ದ್ವಿಚಕ್ರವಾಹನದಲ್ಲಿ ಮನೆಗೆ ಮರಳಿದ ಸರೋಜರವರು ಒಳಗೆ ಹೋಗಿ ಪರಿಶೀಲಿಸಿದಾಗ ಬೀರುವಿನಲ್ಲಿ ಇಡಲಾಗಿದ್ದ ಚಿನ್ನಾಭರಣ, ನಗದು ಕಳ್ಳತನ ಮಾಡಿರುವುದು ತಿಳಿದು ಬಂದಿದೆ. 
    ೪೦ ಗ್ರಾಂ. ತೂಕದ ಸುಮಾರು ೨ ಲಕ್ಷ ರು. ಮೌಲ್ಯದ ಚಿನ್ನದ ಸರ, ೧೯ ಗ್ರಾಂ. ತೂಕದ  ಸುಮಾರು ೯೫ ಸಾವಿರ ರು. ಮೌಲ್ಯದ ಚಿನ್ನದ ಸರ,  ೪೦ ಗ್ರಾಂ. ತೂಕದ ಸುಮಾರು ೨ ಲಕ್ಷ ರು. ಮೌಲ್ಯದ ೩ ಬಂಗಾರದ ಬಳೆಗಳು, ೧೫ ಗ್ರಾಂ. ತೂಕದ ಸುಮಾರು ೭೫ ಸಾವಿರ ರು. ಮೌಲ್ಯದ ಮೂರು ಜೊತೆ ಕಿವಿಓಲೆ, ೯ ಗ್ರಾಂ. ತೂಕದ ಒಟ್ಟು ಸುಮಾರು ೪೫ ಸಾವಿ ರು. ಮೌಲ್ಯದ ೨ ಚಿನ್ನದ ಉಂಗುರಗಳು, ೩ ಗ್ರಾಂ. ತೂಕದ ಸುಮಾರು ೧೫ ಸಾವಿರ ರು. ಮೌಲ್ಯದ ಒಂದು ಜೊತೆ ಮಾಟಿ,  ಸುಮಾರು ೬ ಗ್ರಾಂ. ತೂಕದ ೩೦ ಸಾವಿರ ರು. ಐದು ಬಂಗಾರದ ನಾಣ್ಯಗಳು.  ಬೆಳ್ಳಿಯ ದೇವರ ಮುಖವಾಡ, ಒಂದು ಜೊತೆ ಬೆಳ್ಳಿ ಕಾಲುಚೈನ್ ಮತ್ತು ಬೆಳ್ಳಿ ನಾಣ್ಯಗಳು ಸೇರಿದಂತೆ ಸುಮಾರು ೫೦೦ ಗ್ರಾಂ. ತೂಕದ ಒಟ್ಟು ೫೦ ಸಾವಿರ ರು. ಮೌಲ್ಯದ ಬೆಳ್ಳಿಯ ಆಭರಣಗಳು, ಒಟ್ಟು ೩೪ ಸಾವಿರ ರು. ನಗದು ಹಣ ಮತ್ತು ೪ ಎ.ಟಿ.ಎಂ ಕಾರ್ಡ್, ೨ ಪಾನ್ ಕಾರ್ಡ್, ೨ ವೋಟಾರ್ ಐಡಿ  ಕಳ್ಳತನ ಮಾಡಲಾಗಿದೆ. ಒಟ್ಟು ಚಿನ್ನಾಭರಣ ಹಾಗು ನಗದು ಸೇರಿ ೭,೪೪,೦೦೦ ಸ್ವತ್ತು ಕಳ್ಳತನ ಮಾಡಲಾಗಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.