ಶ್ರೀ ಕೆರೆ ಏರಿ ಚೌಡೇಶ್ವರಿ ದೇವಸ್ಥಾನದ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ

    ಭದ್ರಾವತಿ : ತಾಲೂಕಿನ ತಾಷ್ಕೆಂಟ್‌ನಗರ ಗ್ರಾಮದ ಹೊರಭಾಗದಲ್ಲಿರುವ ಶ್ರೀ ಕೆರೆ ಏರಿ ಚೌಡೇಶ್ವರಿ ದೇವಸ್ಥಾನದ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ. 
    ದೇವಸ್ಥಾನದ ಅರ್ಚಕ ಉಮೇಶ್‌ರವರು ಫೆ.೮ರ ಮಧ್ಯಾಹ್ನ ೨.೩೦ ಸಮಯದಲ್ಲಿ ಪೂಜೆ ಮುಗಿಸಿಕೊಂಡು ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದು, ಪುನಃ ಮರುದಿನ ಬೆಳಿಗ್ಗೆ ೯ ಗಂಟೆ ಸಮಯದಲ್ಲಿ ದೇವಸ್ಥಾನಕ್ಕೆ ಬಂದಾಗ ದೇವಾಸ್ಥಾನ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಒಳಗೆ ಹೋಗಿ ನೋಡಿದಾಗ ದೇವರ ವಿಗ್ರಹದ ಮೇಲಿದ್ದ ಸುಮಾರು ೮೦ ಗ್ರಾಂ. ತೂಕದ ೪ ಸಾವಿರ ರು. ಮೌಲ್ಯದ ಬೆಳ್ಳಿಯ ಕಿರೀಟ, ಸುಮಾರು ೪೦ ಗ್ರಾಂ. ತೂಕದ ೨ ಸಾವಿರ ರು. ಮೌಲ್ಯದ ಬೆಳ್ಳಿಯ ತ್ರಿಶೂಲ ಹಾಗು ಒಟ್ಟು ೧೬ ಸಾವಿರ ರು. ಮೌಲ್ಯದ ತಲಾ ೧ ಗ್ರಾಂ. ತೂಕದ ೨ ಚಿನ್ನದ ತಾಳಿ, ಸುಮಾರು ೬ ಗ್ರಾಂ. ತೂಕದ ೪೫ ಸಾವಿರ ರು. ಮೌಲ್ಯದ ಚಿನ್ನದ ಮೂಗುತಿ ಹಾಗು ಭಕ್ತರಿಗೆ ಆಶೀರ್ವಾದ ಮಾಡಲು ಬಳಸುವ ಸುಮಾರು ೨೫೦ ಗ್ರಾಂ. ತೂಕದ ೨೨ ಸಾವಿರ ರು. ಮೌಲ್ಯದ ಬೆಳ್ಳಿಯ ಕಿರೀಟ ಸೇರಿದಂತೆ ಒಟ್ಟು ೮೯ ಸಾವಿರ ರು. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದೆ. 
    ಈ ಸಂಬಂಧ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಪಿ ಲಿಂಗೇಶ್ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.