ಪಿ.ಎಂ.ಶ್ರೀ ಸರ್ಕಾರಿ ಶಾಲೆ ಇನ್ನೂ ಹೆಚ್ಚಿನ ಬೆಳವಣಿಗೆಗೆ ಸಹಕರಿಸಿ : ಎಸ್. ಮಣಿಶೇಖರ್

ಭದ್ರಾವತಿ ಹಳೇನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನ ಪಕ್ಕದಲ್ಲಿರುವ ಪಿ.ಎಂ.ಶ್ರೀ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ: ಹಳೇನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನ ಪಕ್ಕದಲ್ಲಿರುವ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಪಿ.ಎಂ.ಶ್ರೀ  ಯೋಜನೆಯಡಿ ಆಯ್ಕೆಯಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಈ ಶಾಲೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಪ್ರತಿಯೊಬ್ಬರ ಸಹಕಾರ ಅಗವತ್ಯವಾಗಿದೆ ಎಂದು ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್ ಹೇಳಿದರು. 
    ಅವರು ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಪಿ.ಎಂ.ಶ್ರೀ ಯೋಜನೆಗೆ ಆಯ್ಕೆಯಾಗಿರುವ ಏಕೈಕ ಸರ್ಕಾರಿ ಶಾಲೆ ಇದಾಗಿದೆ ಎಂದರು.  ಎಲ್.ಕೆ.ಜಿ ಯಿಂದ ೮ನೇ ತರಗತಿವರೆಗೆ ಒಟ್ಟು ಸುಮಾರು ೩೦೦ ಅತಿ ಮಕ್ಕಳ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಈ ಶಾಲೆ ಪಾತ್ರವಾಗಿದೆ. ಈ ಶಾಲೆಯಲ್ಲಿ ಪರಿಣಿತ ಶಿಕ್ಷಕ ವರ್ಗದವರಿದ್ದು, ಖಾಸಗಿ ಶಾಲೆಗಳನ್ನು ಮೀರಿಸುವ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಶಾಸಕರಾದ ಬಿ.ಕೆ ಸಂಗಮೇಶ್ವರ್‌ರವರು ಈ ಶಾಲೆಯ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿ ಅಭಿವೃದ್ಧಿಗೊಳಿಸಲು ಸುಮಾರು ೯ ಲಕ್ಷ ರು. ಅನುದಾನ ಬಿಡುಗಡೆಗೊಳಿಸಿದ್ದಾರೆ ಎಂದರು. 
    ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು, ಶಾಲಾಭಿವೃದ್ಧಿ ಸಮಿತಿಯವರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಶಾಲೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಮುಂದಾಗಬೇಕೆಂದು ಕರೆ ನೀಡಿದರು.  
    ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ಎಸ್. ಸೈಯದ್ ಆಸಿಫ್ ಅಧ್ಯಕ್ಷತೆವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಮಮತಾ, ಸದಸ್ಯಾರಾದ ಅಜಯ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಸದಸ್ಯ ಮೊಸಿನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಮುಖರಾದ ಎಸ್.ಕೆ ಮೋಹನ್ , ಪೃಥ್ವಿ ರಾಜ್, ಬಸವಂತರಾವ್ ಧಾಳೆ, ಮಲ್ಲಿಕಾರ್ಜುನ, ಶ್ರೀಧರ್ ಗೌಡ, ಪುಟ್ಟಲಿಂಗ ಮೂರ್ತಿ, ಶಾಲಾ ಸುಧಾರಣಾ ಸಮಿತಿಯ ಜುಂಜ್ಯಾನಾಯ್ಕ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರಾದ ಸುನೀತಾ, ಅನಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಅನಿತಾ ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಮೊಹಿದ್ದೀನ್, ದೈಹಿಕ ಶಿಕ್ಷಣ ಶಿಕ್ಷಕ ರಾಜಾನಾಯ್ಕ ನಿರೂಪಿಸಿ ಶೋಭಾ ಪ್ಲೋರಿನ್ ವಂದಿಸಿದರು.