ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಜೆಡಿಎಸ್ ಸದಸ್ಯೆ ಕೆ.ಪಿ ಪ್ರೇಮಾ ಸ್ಥಾಯಿ ಸಮಿತಿ ನೂತನ ಅಧ್ಯಕ್ಷೆ



ಭದ್ರಾವತಿ ನಗರಸಭೆ ಉಳಿದ ಅವಧಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ೨೩ನೇ ವಾರ್ಡ್ ಸದಸ್ಯೆ ಕೆ.ಪಿ ಪ್ರೇಮಾ ಮಂಗಳವಾರ ಬೆಳಿಗ್ಗೆ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು. 
    ಭದ್ರಾವತಿ : ನಗರಸಭೆ ಉಳಿದ ಅವಧಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ೨೩ನೇ ವಾರ್ಡ್ ಸದಸ್ಯೆ ಕೆ.ಪಿ ಪ್ರೇಮಾ ಮಂಗಳವಾರ ಬೆಳಿಗ್ಗೆ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು. 
    ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ನಗರಸಭೆ ಸದಸ್ಯೆಯಾಗಿ ಆಯ್ಕೆಯಾಗಿರುವ ಕೆ.ಪಿ ಪ್ರೇಮಾ ಮೊದಲ ಬಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. ೩೫ ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ೧೯ ಕಾಂಗ್ರೆಸ್, ೧೧ ಜೆಡಿಎಸ್, ೪ ಬಿಜೆಪಿ ಮತ್ತು ೧ ಪಕ್ಷೇತರ ಸದಸ್ಯರಿದ್ದಾರೆ. ನಗರಸಭೆ ಆಡಳಿತ ಕಾಂಗ್ರೆಸ್ ಪಕ್ಷ ಚುಕ್ಕಾಣಿ ಹಿಡಿದಿದ್ದು, ಇನ್ನೇನು ಕೆಲವೇ ಕೆಲವು ತಿಂಗಳು ಬಾಕಿ ಉಳಿದಿವೆ. ಶಾಸಕ ಬಿ.ಕೆ ಸಂಗಮೇಶ್ವರ್ ತೀರ್ಮಾನದಂತೆ ಪ್ರೇಮಾ ಅವರನ್ನು ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. 
    ಈ ಹಿಂದೆ ಇವರ ಪತಿ, ಛಲವಾದಿಗಳ ಸಮಾಜದ(ಪರಿಶಿಷ್ಟ ಜಾತಿ) ಮಾಜಿ ಅಧ್ಯಕ್ಷ ಬದರಿನಾರಾಯಣರವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ೨ ಬಾರಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಇವರ ಪತ್ನಿ ಅಧ್ಯಕ್ಷರಾಗಿದ್ದು, ಅದರಲ್ಲೂ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಎಂಬುದು ವಿಶೇಷವಾಗಿದೆ. 
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಹಾಗು ಉಪಾಧ್ಯಕ್ಷ ಬಷೀರ್ ಅಹಮದ್, ಪೌರಾಯುಕ್ತ ಎನ್.ಕೆ ಹೇಮಂತ್, ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಚನ್ನಪ್ಪ, ಕಾಂತರಾಜ್, ಕೋಟೇಶ್ವರಾವ್, ಅನುಸುಧಾ ಮೋಹನ್ ಪಳನಿ, ಸರ್ವಮಂಗಳ ಭೈರಪ್ಪ, ಶೃತಿ ಸಿ. ವಸಂತಕುಮಾರ್ ಕೆ.ಜಿ, ಶಶಿಕಲಾ ನಾರಾಯಣಪ್ಪ, ಮಹಮದ್ ಯೂಸುಫ್, ಬಸವರಾಜ ಬಿ. ಆನೇಕೊಪ್ಪ ಸೇರಿದಂತೆ ಇನ್ನಿತರರು ನೂತನ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಅವರನ್ನು ಅಭಿನಂದಿಸಿದರು.   ಪ್ರಸ್ತುತ ಸೈಯದ್ ರಿಯಾಜ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.