ವೇಶ್ಯಾವಾಟಿಕೆ ದಂಧೆ : ಮೂವರು ಮಹಿಳೆಯರಿಗೆ ೧೦ ವರ್ಷ ಕಠಿಣ ಶಿಕ್ಷೆ
ನಗರಸಭೆ ವ್ಯಾಪ್ತಿಯ ಉಜ್ಜನಿಪುರದಲ್ಲಿ ೨೦೨೧ರಲ್ಲಿ ನಡೆದಿದ್ದ ಘಟನೆ
ಭದ್ರಾವತಿ: ಮನೆಗೆ ಮಹಿಳೆಯರನ್ನು ಕರೆದುಕೊಂಡು ಬಲವಂತದಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಮಹಿಳೆಯರಿಗೆ ನಗರದ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೧೦ ವರ್ಷ ಕಠಿಣ ಸಜೆ ಹಾಗು ತಲಾ ೧.೬೧ ಲಕ್ಷ ರು. ದಂಡ ವಿಧಿಸಿ ತೀರ್ಪು ನೀಡಿದೆ.
ಸುಮಾರು ೫ ವರ್ಷದ ಹಿಂದೆ ೨೪ ಡಿಸೆಂಬರ್ ೨೦೨೧ ರಂದು ಅಂದಿನ ಪ್ರಭಾರ ಪೊಲೀಸ್ ಉಪಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿತೇಂದ್ರ ಕುಮಾರ್ ದಯಾಮರವರು ಉಜ್ಜನಿಪುರದ ಮಾರಿಯಮ್ಮ ದೇವಸ್ಥಾನದ ಹಿಂಭಾಗ, ೩ನೇ ಕ್ರಾಸ್‌ನಲ್ಲಿರುವ ವಾಸದ ಮನೆಯೊಂದರ ಮೇಲೆ ವೇಶ್ಯಾವಾಟಿಕೆ ದಂಧೆನಡೆಸುತ್ತಿದ್ದ ಆರೋಪದ ಮೇಲೆ ದಾಳಿ ನಡೆಸಿದ್ದರು.
ಚಂದ್ರಕಲಾ ಮತ್ತು ಶಿಲ್ಪಾ ಎಂಬ ಇಬ್ಬರು ಮಹಿಳೆಯರು ಹಣ ಸಂಪಾದನೆ ಮಾಡಲು ಕವಿತಾ ಮತ್ತು ಯೊಗೇಶ್‌ರವರೊಂದಿಗೆ ಸೇರಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ವೇಶ್ಯಾವಾಟಿಕೆ ದಂಧೆ ನಡೆಸುವ ಉದ್ದೇಶದಿಂದ ಶಿಲ್ಪಾರವರ ಮನೆಗೆ ಹೆಣ್ಣು ಮಕ್ಕಳನ್ನು ಕರೆಯಿಸಿಕೊಂಡು ನೊಂದ ಮಹಿಳೆಯರಿಗೆ `ಈ ದಂಧೆಗೆ ನಿಮಗೆ ನಾವು ಹಣ ನೀಡುತ್ತೇವೆ, ಈ ವಿಚಾರ ಮನೆಯವರಿಗೆ ಹೇಳಿದರೆ ಕಿರುಕುಳ ನೀಡುವುದಾಗಿ' ಹೆದರಿಸಿ, ಮನೆಯ ಒಳಗೆ ಇರಿಸಿಕೊಂಡು, ವೇಶ್ಯಾವಾಟಿಕೆ ದಂಧೆ ನಡೆಸಿ, ಹಣ ಸಂಪಾದನೆ ಮಾಡುತ್ತಿದ್ದರು ಎಂಬ ದೂದು ಪೇಪರ್‌ಟೌನ್ ಪೊಲೀಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಕರಣದ ಅಂದಿನ ತನಿಖಾಧಿಕಾರಿ ಠಾಣಾ ಉಪ ನಿರೀಕ್ಷಕರಾಗಿದ್ದ ಇ.ಓ ಮಂಜುನಾಥರವರು ಪ್ರಕರಣದ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು.
೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಆರೋಪಿತರಾದ ಜೇಡಿಕಟ್ಟೆ ಹೊಸೂರು ನಿವಾಸಿ ಚಂದ್ರಕಲಾ ಅಲಿಯಾಸ್ ಶ್ವೇತಾ(೩೧), ಉಜ್ಜನಿಪುರ ಮಾರಿಯಮ್ಮ ದೇವಸ್ಥಾನ ಹಿಂಭಾಗದ ನಿವಾಸಿ ಎಸ್. ಶಿಲ್ಪಾ(೩೫) ಮತ್ತು ಹೊಸ ಸಿದ್ದಾಪುರ ನಿವಾಸಿ ಕವಿತಾ(೪೦)ರವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು.