ನ್ಯೂಟೌನ್ ಪೊಲೀಸರಿಂದ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನ ರಕ್ಷಣೆ

ಭದ್ರಾವತಿ ಹುತ್ತಾ ರೈಲ್ವೆ ಹಳಿ ಮೇಲೆ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಆತನನ್ನು ನ್ಯೂಟೌನ್ ಠಾಣೆ ಪೊಲೀಸರು ರಕ್ಷಿಸಿ ಪೋಷಕರಿಗೆ ಒಪ್ಪಿಸಿರುವ ಘಟನೆ ನಡೆದಿದೆ. 
    ಭದ್ರಾವತಿ : ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಗುರುತಿಸಿಕೊಳ್ಳುತ್ತಿದ್ದು, ಸಮುದಾಯದ ಜೊತೆ ಭಾವನಾತ್ಮಕ ಒಡನಾಟ ಹೊಂದಿದೆ. ಕೇವಲ ಅಪರಾಧ ಪ್ರಕರಣಗಳಲ್ಲಿ ನೊಂದವರಿಗೆ ಧ್ವನಿಯಾಗಿರದೆ ನೈಸರ್ಗಿಕ ಅವಘಡಗಳು, ರಸ್ತೆ ಅಪಘಾತಗಳಲ್ಲಿ ಸಿಲುಕಿದವರನ್ನು, ಅನಾಥರು, ನಿರ್ಗತಿಕರ ರಕ್ಷಣೆ, ಮಕ್ಕಳು ಮತ್ತು ಮಹಿಳೆಯರ ರಕ್ಷಣೆ ಹಾಗು ವಿಭಿನ್ನ ರೀತಿಯ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಾವಿಸುತ್ತಿರುವುದು ವಿಶೇಷವಾಗಿದೆ. ಇಲ್ಲೊಂದು ಘಟನೆಯಲ್ಲಿ ಪ್ರೇಮ ವೈಫಲ್ಯದ ಹಿನ್ನಲೆಯಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿ ಆತನ ಪೋಷಕರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.  
    ಫೆ. ೨೨ರ ರಾತ್ರಿ ಹುತ್ತಾ ರೈಲ್ವೆ ಹಳಿ ಮೇಲೆ ೧೮ ವರ್ಷದ ಯುವಕನೊಬ್ಬನು ಮಲಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ನ್ಯೂಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳಾದ ನಾಗರಾಜ ಹಾಗೂ ಸಲೀಂರವರು ಸ್ಥಳಕ್ಕೆ ತೆರಳಿ  ಸಾರ್ವಜನಿಕರ ಸಹಾಯದಿಂದ ಯುವಕನನ್ನು ರಕ್ಷಿಸಿ ಠಾಣೆಗೆ ಕರೆತಂದಿದ್ದಾರೆ. ವಿಚಾರಿಸಿದಾಗ ಯುವಕ, ಪ್ರೇಮ ವೈಫಲ್ಯದಿಂದ ಮನನೊಂದು, ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದಾನೆ. ಆತನಿಗೆ ಬುದ್ಧಿವಾದ ಹೇಳಿ ಪೋಷಕರನ್ನು ಕರೆಸಿ ಅವರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ.  ನ್ಯೂಟೌನ್ ಪೊಲೀಸರ ಉತ್ತಮವಾದ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಪ್ರಶಂಸಿಸಿ ಅಭಿನಂದಿಸಿರುತ್ತಾರೆ.