ಹಿಂದೂ ಸಂಸ್ಕೃತಿ ಪಾಲಿಸಿದರೆ ಜಗತ್ತಿನಲ್ಲಿ ಶಾಂತಿ : ಯದುಕೃಷ್ಣ ಮತ್ತೂರು

ಭದ್ರಾವತಿ ಹಳೇನಗರದ ಭೂತನಗುಡಿ ಶ್ರೀ ಕೃಷ್ಣರುಕ್ಮಿಣಿ ದೇವಸ್ಥಾನ ಮುಂಭಾಗ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಆರ್‌ಎಸ್‌ಎಸ್ ಪ್ರಾಂತ ಸಹ ಸಂಪರ್ಕ ಪ್ರಮುಖ್ ಯದುಕೃಷ್ಣ ಮತ್ತೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ: ಭಾರತದ ಸನಾತನ ಹಿಂದೂ ಸಂಸ್ಕೃತಿ ಜಗತ್ತಿನ ಎಲ್ಲಾ ಸಂಸ್ಕೃತಿಗಳ ತಾಯಿಯಾಗಿದೆ. ಈ ಸಂಸ್ಕೃತಿಯನ್ನು ಪಾಲಿಸಿದರೆ ಜಗತ್ತಿನಲ್ಲಿ ಶಾಂತಿ ನೆಲೆಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆರ್‌ಎಸ್‌ಎಸ್ ಪ್ರಾಂತ ಸಹ ಸಂಪರ್ಕ ಪ್ರಮುಖ್ ಯದುಕೃಷ್ಣ ಮತ್ತೂರು ತಿಳಿಸಿದರು.
    ಅವರು ಹಳೇನಗರದ ಭೂತನಗುಡಿ ಶ್ರೀ ಕೃಷ್ಣರುಕ್ಮಿಣಿ ದೇವಸ್ಥಾನ ಮುಂಭಾಗ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.
    ಹಿಂದೂ ಧರ್ಮದ ಆಚರಣೆ ಫಲವಾಗಿ ಇಂದು ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನ ೧೨ ದೇಶಗಳಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಅಲ್ಲದೆ ಪ್ರಪಂಚದ ಇತರೆ ದೇಶಗಳಲ್ಲಿ ದೊಡ್ಡ ದೊಡ್ಡ ದೇವಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಹಿಂದೂ ಧರ್ಮದ ಆಚರಣೆಗಳನ್ನು ಪಾಲಿಸಲಾಗುತ್ತಿದೆ. ಇದು ೪೦೦ ವರ್ಷಗಳ ಹಿಂದೆ ಹಿಂದುತ್ವದ ನೆಲೆಯಲ್ಲಿ ಗುರುತಿಸಿಕೊಳ್ಳುವಂತಹ ವಾತಾವರಣ ನಿರ್ಮಾಣದ ಫಲವಾಗಿದೆ ಎಂದರು.
    ದೇಶದಲ್ಲಿ ಆದಿಲ್‌ಶಾಹಿ, ನಿಜಾಮ್‌ಶಾಹಿ, ಮೋಘಲ್‌ಶಾಹಿಗಳ ಆಡಳಿತ ನಡೆಯುವ ಸಮಯದಲ್ಲಿ ಹಿಂದೂ ಧರ್ಮ ಉದಯವಾಯಿತು. ಸಾಮಂತರ ಮಗನಾಗಿ ಜನಿಸಿದ ಶಿವಾಜಿ ವಿಜಯನಗರ ಸಾಮ್ರಾಜ್ಯದ ಆಡಳಿತಗಾರರಿಂದ ಅನುಭವ ಪಡೆದು ಅದರ ಪ್ರೇರಣೆಯಿಂದ ಮರಾಠ ಸಾಮ್ರಾಜ್ಯ ನಿರ್ಮಾಣ ಮಾಡಿ ಹಿಂದೂವಿ ಸ್ವರಾಜ್ಯ ನಿರ್ಮಾಣ ಮಾಡಿದರು. ಈ ಸಂದರ್ಭದಲ್ಲಿ ಯಾವುದೆ ಸಮಸ್ಯೆ ಬರಲಿ ಅದನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂಬ ಸಂಕಲ್ಪ ಮಾಡಿದ್ದು ಮೊದಲಿಗೆ ಶಿವಾಜಿ ನಂತರ ಉಳಿದವರು ಅವರ ಜೊತೆಗೆ ಕೈಜೋಡಿಸಿದರು. ತನ್ನ ಹೋರಾಟದಲ್ಲಿ ಖಡ್ಗ ಮತ್ತು ಕರುಣೆ ಎಂಬ ಮೂಲ ಮಂತ್ರವನ್ನು ಹೊಂದಿದ್ದರಲ್ಲದೆ ನೌಕಾದಳ ಸ್ಥಾಪನೆ ಮಾಡಿದ್ದು ಇವರೇ ಮೊದಲಿಗರು ಎಂದರಲ್ಲದೆ, ಇವರು ಕರ್ನಾಟಕದ ಮೂಲದವರು ಎಂಬುದು ಗಮನಿಸಬೇಕಾದ ಸಂಗತಿ ಎಂದರು.
    ಗ್ರೀಕ್ ದೇಶದ ಆಲೆಗ್ಸಾಂಡರ್, ಅರಬ್ ದೇಶದ ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಮಾಡಿದರು ಎಂದು ಆರೋಪಿಸುತ್ತೇವೆ. ಆದರೆ ಅವರ ದೇಶದಲ್ಲಿ ಅವರ ಸ್ಮರಣೆ ಮಾಡುವವರೇ ಇಲ್ಲ. ಆದರೆ ನಮ್ಮ ದೇಶದಲ್ಲಿ ದೇಶಕ್ಕಾಗಿ ಹೋರಾಡಿದವರು, ತಮ್ಮ ಪ್ರಾಣ ಬಲಿದಾನ ಮಾಡಿದವರು, ಪ್ರತಿಯೊಬ್ಬ ಮಹಾಪುರುಷರನ್ನು, ಸಾಮ್ರಾಜ್ಯಗಳನ್ನು ಇಂದಿಗೂ ಸ್ಮರಿಸಿ ಗೌರವಿಸುವುದು ನಮ್ಮ ದೇಶದಲ್ಲಿ ಮಾತ್ರ ಎಂದರು. 
       ಎಚ್.ಆರ್ ಲೋಕೇಶ್ವರರಾವ್ ಮಾತನಾಡಿ, ಛತ್ರಪತಿ ಶಿವಾಜಿ ಜಯಂತಿಯ ಹೆಸರಿನಲ್ಲಿ ನಗರದಲ್ಲಿ ಮರಾಠ ಸಮಾಜದ ಉಪಪಂಗಡಗಳು ಒಗ್ಗೂಡಿರುವುದು ಸಂತಸದ ಸಂಗತಿಯಾಗಿದೆ. ಈ ರೀತಿಯ ಬೆಳವಣಿಗೆಗಳ ಮೂಲಕ ಹಿಂದೂ ಸಮಾಜ ಹೆಚ್ಚು ಸಂಘಟಿತಗೊಳ್ಳಬೇಕೆಂದರು. 
       ಮರಾಠಿಗರ ಮಾತೃ ಭಾಷೆ ಮರಾಠಿ. ಆದರೂ ನಾವು ಜೀವಿಸುತ್ತಿರುವುದು ಕರ್ನಾಟಕ ರಾಜ್ಯದಲ್ಲಿ ಅದ್ದರಿಂದ ನಾವು ಕನ್ನಡ ಮರಾಠಿಗರು ಎಂಬುದನ್ನು ಸದಾ ಸ್ಮರಿಸಬೇಕು . ಆದರೆ ನಮ್ಮ ಮೂಲವನ್ನು ಎಂದೂ ಮರೆಯಬಾರದು ಎಂದರು.
ಬಿ.ವಿ ನಾಗೇಶ್ ಸಭೆಯನ್ನುದ್ದೆಶಿಸಿ ಮಾತನಾಡಿದರು.  ದುಗ್ಗೇಶ್ ತೇಲ್ಕರ್, ರಾಘವೇಂದ್ರ, ಅಶೋಕ್‌ರಾವ್ ಅಂಬೋರೆ, ವಿಶ್ವನಾಥರಾವ್, ನಾಗೇಂದ್ರರಾವ್, ನಾಗರಾಜ್ ರಾವ್ ಚೌವ್ಹಾಣ್, ವಿಶ್ವನಾಥರಾವ್ ಮಾಳೋದ್ಕರ್, ಪಾಂಡು ಚಾರ್‌ಕೋಲ್, ವಿನಯ್ ಹೆಬ್ಬಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ದಿವ್ಯ, ಆವನಿ ಗುಪ್ತ ಪ್ರಾರ್ಥಿಸಿ, ಧನುಷ್ ಬೋಸ್ಲೆ ಸ್ವಾಗತಿಸಿದರು. ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.