ಭದ್ರಾವತಿ ನಗರಸಭೆ : ಹಲವು ಹೊಸ ಯೋಜನೆಗಳೊಂದಿಗೆ 1.46 ಕೋ. ರು. ಉಳಿತಾಯ ಬಜೆಟ್ ಮಂಡನೆ

ಹಲವು ಹೊಸ ಯೋಜನೆಗಳೊಂದಿಗೆ ಭದ್ರಾವತಿ ನಗರಸಭೆ ಪ್ರಸ್ತುತ ಅವಧಿಯ ಕೊನೆಯ ಬಜೆಟ್ ಶುಕ್ರವಾರ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್ ಮಂಡಿಸಿದರು.
    ಭದ್ರಾವತಿ: ಹಲವು ಹೊಸ ಯೋಜನೆಗಳೊಂದಿಗೆ ನಗರಸಭೆ ಪ್ರಸ್ತುತ ಅವಧಿಯ ಕೊನೆಯ ಬಜೆಟ್ ಶುಕ್ರವಾರ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್ ಮಂಡಿಸಿದರು. ಈ ಬಾರಿ 1.46 ಕೋ. ರು. ಉಳಿತಾಯ ಬಜೆಟ್ ಮಂಡಿಸಲಾಗಿದ್ದು, ನಗರಸಭೆ ಇತಿಹಾದಲ್ಲಿಯೇ ಒಂದೇ ಅವಧಿಯಲ್ಲಿ 2 ಬಾರಿ ಅಧ್ಯಕ್ಷರಾಗಿ, 2 ಬಾರಿ ಬಜೆಟ್ ಮಂಡಿಸಿರುವ ದಾಖಲೆಗೆ ಗೀತಾರಾಜಕುಮಾರ್ ಪಾತ್ರರಾಗಿದ್ದಾರೆ.
    ಬಜೆಟ್ ಮಂಡಿಸಿದ ಗೀತಾರಾಜಕುಮಾರ್, ಆರಂಭದಲ್ಲಿ ಈ ಬಾರಿ ಆಯ-ವ್ಯಯದ ಆರಂಭಿಕ ಶಿಲ್ಕು 2,161.44 ಲಕ್ಷ ರು. ಗಳಾಗಿದೆ. ಒಟ್ಟು ಆದಾಯ(ಸ್ವಿಕೃತಿ) 14,808.87 ಲಕ್ಷ ರು.ಗಳಾಗಿದ್ದು, ಇದರಲ್ಲಿ ರಾಜಸ್ವ ಸ್ವಿಕೃತಿಗಳು 5,476.93 ಲಕ್ಷ ರು., ಬಂಡವಾಳ ಸ್ವಿಕೃತಿಗಳು 3,351 ಲಕ್ಷ ರು. ಮತ್ತು ಅಸಾಧಾರಣ ಸ್ವಿಕೃತಿಗಳು 5,980.84 ಲಕ್ಷ ರು. ಸೇರ್ಪಡೆಗೊಂಡಿವೆ. ಈ ಬಾರಿ ಒಟ್ಟು ವೆಚ್ಚ 14,662.87 ಲಕ್ಷ ರು. ಗಳಾಗಿದ್ದು, ಇದರಲ್ಲಿ ರಾಜಸ್ವ ಪಾವತಿಗಳು 517.76 ಲಕ್ಷ ರು., ಬಂಡವಾಳ ಪಾವತಿಗಳು 3,554.18 ಲಕ್ಷ ರು. ಹಾಗು ಅಸಾಧಾರಣ ಪಾವತಿಗಳು 5,980.94 ಲಕ್ಷ ರು. ಒಳಗೊಂಡಿವೆ. ಆಯ-ವ್ಯಯದ ಆಖೈರು ಶಿಲ್ಕು 2,307.44 ಲಕ್ಷ ರು.ಗಳಾಗಿದ್ದು, ಒಟ್ಟು ಉಳಿತಾಯ 146 ಲಕ್ಷ ರು. ಗಳಾಗಿದೆ ಎಂದರು.
    ನಗರದ ಸರ್ವತೋಮುಖ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಎಲ್ಲರ ಸಲಹೆ, ಸಹಕಾರ ಮತ್ತು ಮಾರ್ಗದರ್ಶನದ ಮೂಲಕ ನಗರದ ಸಮಗ್ರ ಅಭಿವೃದ್ಧಿಗೆ, ನಾಗರೀಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಮಂಡಿಸಲಾಗಿದೆ ಎಂದರು.
    2025-26 ಸಾಲಿನಲ್ಲಿ ಹಲವು ಸಾಧನೆಗಳನ್ನು ಮಾಡಲಾಗಿದೆ. ಕೆಲವು ಯೋಜನೆಗಳು ಪೂರ್ಣಗೊಂಡಿದ್ದು, ಇನ್ನೂ ಕೆಲವು ಪ್ರಗತಿಯಲ್ಲಿವೆ. 2026-27ನೇ ಸಾಲಿನಲ್ಲಿ ಹೊಸ ಗುರಿಗಳನ್ನು ಹೊಂದಲಾಗಿದ್ದು, ಶಾಸಕರು, ಸದಸ್ಯರು ಹಾಗು ಸಾರ್ವಜನಿಕರ ಸಹಕಾರ ಈ ನಿಟ್ಟಿನಲ್ಲಿ ಹೆಚ್ಚಿನದ್ದಾಗಿದೆ ಎಂದರು.
    2025-26ನೇ ಸಾಲಿನ ಸಾಧನೆಗಳು :-
    2025-26ನೇ ಸಾಲಿನಲ್ಲಿ ಹಲವು ಸಾಧನೆಗಳನ್ನು ಮಾಡಲಾಗಿದ್ದು, ಈ ಪೈಕಿ ಘನತ್ಯಾಜ್ಯ ನಿರ್ವಹಣೆಗಾಗಿ ಪರಿಷ್ಕೃತ ದರಗಳನ್ನು ಅಳವಡಿಸಿಕೊಂಡು 97 ಲಕ್ಷ ರು. ಆದಾಯ ಕ್ರೋಡಿಕರಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್-2.0 ಯೋಜನೆಯಡಿ 5.29 ಕೋ. ರು. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಮೆಟಿರಿಯಲ್ ರಿಕವರಿ ಫೆಸಿಲಿಟಿ ಘಟಕ ಸ್ಥಾಪಿಸಲು ಪ್ರಾಥಮಿಕ ಹಂತದ ಶೆಡ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಕಾಮಗಾರಿ ಮುಕ್ತಾಯಗೊಂಡ ನಂತರ ಅಗತ್ಯ ಯಂತ್ರೋಪಕರಣ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
    15ನೇ ಹಣಕಾಸು 5.78 ಕೋ. ರು. ಅನುದಾನದಲ್ಲಿ ಪೈಪ್ ಲೈನ್, ಮಳೆ ನೀರು ಚರಂಡಿ, ರಸ್ತೆ ಅಭಿವೃದ್ಧಿ, ವಿದ್ಯುತ್ ಸಂಬಂಧಿಸಿದ ಕಾಮಗಾರಿ ಹಾಗು ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ಎಸ್‌ಎಫ್‌ಸಿ ವಿಶೇಷ ಅನುದಾನ 15 ಕೋ. ರು. ಮಂಜೂರಾಗಿದ್ದು, ಈ ಸಂಬಂಧ ರೂಪಿಸಲಾಗಿರುವ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಶೀಘ್ರದಲ್ಲಿಯೇ ಕೆಆರ್‌ಐಡಿಎಲ್ ಸಂಸ್ಥೆ ಮೂಲಕ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದರು
    ಎಸ್‌ಎಫ್‌ಸಿ ಪೋತ್ಸಾಹ ಅನುದಾನದಡಿಯಲ್ಲಿ ಕನಕ ಮಂಟಪ ಮೈದಾನದ ಹತ್ತಿರ ನಗರಸಭೆ ಅಧಿಕಾರಿ ಮತ್ತು ನೌಕರರಿಗೆ ಜಿ+3 ಮಾದರಿಯ ವಸತಿ ಗೃಹಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ವಸತಿಗೃಹಗಳನ್ನು ನಗರಸಭೆ ಅಧಿಕಾರಿ ಮತ್ತು ನೌಕರರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ನಗರ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸುಮಾರು 1,600 ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತç ಚಿಕಿತ್ಸೆ ಕೈಗೊಳ್ಳಲಾಗಿದೆ ಎಂದರು.
    ಅಮೃತ್ 2.0 ಯೋಜನೆಯಡಿ 50 ಲಕ್ಷ ರು. ಅನುದಾನದಲ್ಲಿ ನಗರದ ಬೈಪಾಸ್ ರಸ್ತೆಯ ಉಜ್ಜನೀಪುರದಲ್ಲಿ ಉದ್ಯಾನವನಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಎಸ್.ಎಚ್.ಜಿ ಗುಂಪುಗಳ ಕಾರ್ಯ ಚಟುವಟಿಕೆಗಳನ್ನು ಉತ್ತೇಜಿಸಲು ಸ್ವ-ಸಹಾಯ ಗುಂಪುಗಳ ಮಹಿಳಾ ಕಾರ್ಯಕರ್ತರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ 2025-26 ಸಾಲಿನಲ್ಲಿ ನೀಡಿ 2026-27ನೇ ಸಾಲಿಗೂ ಸಹ ಮುಂದುವರೆಸಲು ಕ್ರಮ ಕೈಗೊಳ್ಳಲಾಗಿದೆ. ಅಂಗವಿಕಲ ಕಲ್ಯಾಣಾಭಿವೃದ್ಧಿಗೆ 2026-27ನೇ ಸಾಲಿನ ಆರ್ಥಿಕ ಹಂಚಿಕೆ ಅನುಗುಣವಾಗಿ ಅಗತ್ಯವಿರುವ ವಿಶೇಷ ಸೌಲಭ್ಯ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ನಗರಸಭೆ ವ್ಯಾಪ್ತಿಯಲ್ಲಿ ಬರುವ 35 ವಾರ್ಡ್ಗಳಲ್ಲಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ನಾಗರೀಕರು ಕುಳಿತುಕೊಳ್ಳಲು ಬೆಂಚ್‌ಗಳನ್ನು ಹಾಕಲಾಗಿದೆ. ನಗರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ತರೀಕೆರೆ ರಸ್ತೆ ರೈಲ್ವೆ ಮೇಲ್ಸೇತುವೆ ಕೆಳ ಭಾಗದಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ಯುವ ಶಕ್ತಿಯನ್ನು ರಚನಾತ್ಮಕ ಮತ್ತು ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಲು ಅವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಹ ಫಲಾನುಭವಿಗಳಿಗೆ ಸಹಾಯಧನ ಬ್ಯಾಂಕ್ ಎಂಡ್ ಸಬ್ಸಿಡಿಯನ್ನಾಗಿ ಬ್ಯಾಂಕ್‌ಗಳ ಮುಖಾಂತರ ಸಾಲ ಸೌಲಭ್ಯ ನೀಡಿ ಯುವ ಶಕ್ತಿಯನ್ನು ಸಬಲೀಕರಣಗೊಳಿಸಲಾಗುತ್ತಿದೆ ಎಂದರು.
    ನಗರಸಭೆ ವ್ಯಾಪ್ತಿಯಲ್ಲಿ ಹಳೇನಗರ ನೀರು ಶದ್ಧೀಕರಣ ಘಟಕದಲ್ಲಿ ಜಾಕ್ವೆಲ್ ಮತ್ತು ಇನ್‌ಟೆಕ್‌ವೆಲ್ ನಿರ್ಮಾಣ ಮಾಡಲು ಈಗಾಗಲೇ 3.23 ಕೋ. ರು. ಅನುದಾನ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನಗರಸಭೆ ವಂತಿಕೆಯನ್ನು ವರ್ಗಾಯಿಸಲಾಗಿದ್ದು, ಇಲಾಖೆಯಿಂದ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆ `ಜಲ್ ಹಿ ಅಮೃತ್'' ಯೋಜನೆಯ ಅನುದಾನ 15.98 ಲಕ್ಷ ರು. ಗಳಲ್ಲಿ ನಗರಸಭೆ ವ್ಯಾಪ್ತಿಯ ಉಜ್ಜನೀಪುರದಲ್ಲಿರುವ 1 ಎಂ.ಎಲ್.ಡಿ ಸಾಮರ್ಥ್ಯದ ಎಸ್.ಬಿ.ಆರ್ ಟೆಕ್ನಾಲಜಿಸ್ ಮಾದರಿಯ ಎಸ್‌ಟಿಪಿಗೆ 20 ಕೆ.ಡಬ್ಲ್ಯೂ ಸೋಲಾರ್ ನೆಟ್ ಮೀಟರಿಂಗ್ ಸಪ್ಲೈ ಇನ್ ಸ್ಟಾಲೇಷನ್ ಟೆಸ್ಟಿಂಗ್ ಕಮಿಷನಿಂಗ್ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದರು.
    ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ 230 ಲಕ್ಷ ರು. ಅನುದಾನದಲ್ಲಿ ಸಮುದಾಯ ಶೌಚಾಲಯ, ಮೂತ್ರಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆ ಪುರಸ್ಕೃತ ಯೋಜನೆಯಾದ ಪ್ರಧಾನ ಮಂತ್ರಿ ಆವಾಜ್ ಯೋಜನೆ ಹಾಗು ವಾಜಪೇಯಿ ನಗರ ವಸತಿ ಯೋಜನೆಗಳಡಿ ಸರ್ವರಿಗೂ ಸೂರು ಎಂಬ ಘೋಷ ವ್ಯಾಕ್ಯದಡಿಯಲ್ಲಿ ಒಟ್ಟು 2,048 ಫಲಾನುಭವಿಗಳನ್ನು ಆಯ್ಕೆ ಮಾಡಿ ಮೊದಲ ಹಂತವಾಗಿ ನಗರ ವ್ಯಾಪ್ತಿಯಲ್ಲಿ ಲಭ್ಯವಿರುವ ಆಶ್ರಯ ಜಾಗದಲ್ಲಿ 416 ಗುಂಪು ಮನೆಗಳನ್ನು(ಜಿ+3 ಮಾದರಿ) ಈಗಾಗಲೇ ನಿರ್ಮಿಸಲಾಗುತ್ತಿದೆ. ಉಳಿದ ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆ ಜಾಗಗಳನ್ನು ಗುರುತಿಸಿ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, 2026-27ನೇ ಸಾಲಿನಲ್ಲಿ ಗುರಿ ಸಾಧಿಸುವ ಆಶಯ ಹೊಂದಿದ್ದೇವೆ ಎಂದರು.
    2026-27ನೇ ಸಾಲಿನ ಗುರಿಗಳು :-
   ನಗರದ ತಾಲ್ಲುಕು ಕಛೇರಿ ರಸ್ತೆಯ ನ್ಯಾಯಾಲಯ ಮುಂಭಾಗದಲ್ಲಿ ನಗರಸಭೆ ಸ್ವತ್ತಾದ ಖಾತೆ ಸಂಖ್ಯೆ 174 ರಲ್ಲಿ ನಗರಸಭೆಯ ಉದ್ದಿಮೆ ನಿಧಿಯಡಿಯಲ್ಲಿ 70 ಲಕ್ಷ ರು. ಅನುದಾನದಡಿಯಲ್ಲಿ 25*80 ಅಡಿ ಜಾಗದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈ ಸಂಬಂಧ ಈಗಾಗಲೇ ಡಿ.ಪಿ.ಆರ್ ತಯಾರಿಸಲಾಗಿದೆ. ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಮೃತ್ 2.0 ಯೋಜನೆಯಡಿ 1.60 ಕೋ. ರು. ಅನುದಾನದಲ್ಲಿ ನಗರದ ಬೊಮ್ಮನಕಟ್ಟೆ ಸ.ನಂ 01ರಲ್ಲಿ 2 ಎಕರೆ 36 ಗುಂಟೆಯ ವಿಸ್ತೀರ್ಣದಲ್ಲಿ ಕೆರೆಯ ಪುನಶ್ಚೇತನ ಅಭಿವೃದ್ಧಿ ಕಾರ್ಯಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
15ನೇ ಹಣಕಾಸು ಯೋಜನೆಯಡಿ ನಗರಸಭೆಗೆ ಜಮೆಯಾಗಿರುವ ಬಡ್ಡಿ ಮೊತ್ತ 15.63 ಲಕ್ಷ ರು. ಗಳಲ್ಲಿ ನಗರಸಭೆ ವ್ಯಾಪ್ತಿಯ ಜೇಡಿಕಟ್ಟೆ ಸರ್ವೇ ನಂ 78/ಎ ರ 18 ಎಕರೆ ಜಾಗದಲ್ಲಿ ಡಾಗ್ ಶೆಲ್ಟರ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ 110 ಲಕ್ಷ ರು. ಅನುದಾನದಲ್ಲಿ ಹೆಚ್ಚುವರಿಯಾಗಿ ಸಮುದಾಯ ಶೌಚಾಲಯಗಳು, ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದರು.
    ನಗರದ ಹೃದಯಭಾಗದಲ್ಲಿ ಹರಿಯುತ್ತಿರುವ ಭದ್ರ ನದಿಯು ಮಳೆಗಾಲದಲ್ಲಿ ಅತಿವೃಷ್ಟಿ ಸಂದರ್ಭದಲ್ಲಿ ಹಾಲಿ ಇರುವ ಸೇತುವೆ ಮುಳುಗುತ್ತಿದ್ದು, ಇದರಿಂದ ನಗರ ಭಾಗಕ್ಕೆ ಸಂಪರ್ಕ ಕಡಿತಗೊಳ್ಳುತ್ತಿದೆ. ಇದರಿಂದ ಸಾರ್ವಜನಕರಿಗೆ ಸುಗಮ ಸಂಚಾರ ಕಲ್ಪಿಸಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹಳೇನಗರ ಭಾಗಕ್ಕೆ ಸುಮಾರು 42 ಕೋ. ರು. ಅಂದಾಜು ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲು ಶಾಸಕರಾದ ಬಿ.ಕೆ.ಸಂಗಮೇಶ್ವರ್‌ರವರ ಶ್ರಮದಿಂದ ಆಡಳಿತಾತ್ಮಕ ಅನುಮೋದನೆ ದೊರಕಿದ್ದು, ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ನಗರಸಭೆಯ ಎಲ್ಲಾ 35 ವಾರ್ಡ್ಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು 27 ಕೋ.ರು. ವೆಚ್ಚದ ರೇಖಾ ಅಂದಾಜು ತಯಾರಿಸಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆಗಾಗಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತ ನಂತರ 2026-27 ನೇ ಸಾಲಿನಲ್ಲಿ ರಸ್ತೆ ಮತ್ತು ಚರಂಡಿಗಳನ್ನು ಅಭಿವೃದ್ಧಿಪಡಿಸಲು ಆಶಯ ಹೊಂದಿರುತ್ತೇವೆ ಎಂದರು.
ಹಳೇನಗರ ಮತ್ತು ನ್ಯೂಟೌನ್ ಭಾಗದಲ್ಲಿರುವ ನೀರು ಶುದ್ದೀಕರಣ ಘಟಕಗಳು, ಬೂಸ್ಟರ್ ಪಂಪ್ ಹೌಸ್‌ಗಳು, ಎಸ್.ಟಿ.ಪಿ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸುವ ಮೂಲಕ ವಿದ್ಯುತ್ ಉಳಿತಾಯ, ಆರ್ಥಿಕ ಮಿತಿ ತರಲು ಉದ್ದೇಶಿಸಲಾಗಿದೆ ಎಂದರು.
    ನಗರಸಭೆ ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಪೌರಾಯುಕ್ತ ಕೆ.ಎನ್ ಹೇಮಂತ್ ಉಪಸ್ಥಿತರಿದ್ದರು. ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.