ಯೋಧರ ಸೇವೆ ಅನನ್ಯ, ಯೋಧರಾಗುವುದು ಯೋಗ : ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ
ಭದ್ರಾವತಿ ತಾಲೂಕಿನ ಬಿಳಿಕಿ ಗ್ರಾಮದಲ್ಲಿ ಶ್ರೀ ನವಿಲೆ ಬಸವೇಶ್ವರ ಸ್ವಾಮಿಯ ಮಹಾರಥೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಬಿಳಿಕಿ ಹಿರೇಮಠದಲ್ಲಿ ದೇವತಾ ಕಾರ್ಯ, ವೀರ ಯೋಧರಿಗೆ ಗೌರವ ಗುರುರಕ್ಷೆ ಹಾಗು ಧಾರ್ಮಿಕ ಪೂಜಾ ಸಮಾರಂಭ ಆಯೋಜಿಸಲಾಗಿತ್ತು.
ಭದ್ರಾವತಿ :ಎಲ್ಲರೂ ಯೋಧರಾಗಲು ಸಾಧ್ಯವಿಲ್ಲ. ಯೋಧರಾಗುವುದು ಯೋಗವಿದ್ದಂತೆ. ಯೋಧರಿಂದ ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದು ತಾಲೂಕಿನ ಬಿಳಿಕಿ ಹಿರೇಮಠ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀಗಳು ಶ್ರೀ ನವಿಲೆ ಬಸವೇಶ್ವರ ಸ್ವಾಮಿಯ ಮಹಾರಥೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಮಠದಲ್ಲಿ ಆಯೋಜಿಸಲಾಗಿದ್ದ ದೇವತಾ ಕಾರ್ಯ, ವೀರ ಯೋಧರಿಗೆ ಗೌರವ ಗುರುರಕ್ಷೆ ಹಾಗು ಧಾರ್ಮಿಕ ಪೂಜಾ ಸಮಾರಂಭದ ನೇತೃತ್ವವಹಿಸಿ ಮಾತನಾಡಿದರು.
ಮಠದ ಪರಂಪರೆಯಂತೆ ಶ್ರೀ ನವಿಲೆ ಬಸವೇಶ್ವರ ಸ್ವಾಮಿಯ ಮಹಾರಥೋತ್ಸವದ ಅಂಗವಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಶ್ರೀ ಮಠದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ನೆರವು ಹೆಚ್ಚಿನದ್ದಾಗಿದೆ ಎಂದು ಸ್ಮರಿಸಿದರು.
ಈ ಬಾರಿ ವಿಶೇಷ ಎಂದರೆ ವೀರ ಸೈನಿಕರಿಗೆ ಮಠದಿಂದ ಗುರುರಕ್ಷೆ ನೀಡುತ್ತಿದ್ದು, ಸೈನಿಕರ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸೈನಿಕರ ಸಂಕಷ್ಟಗಳಿಗೆ ಸಮಾಜ ಪೂರಕವಾಗಿ ಸ್ಪಂದಿಸಿದಾಗ ಮಾತ್ರ ಅವರ ಸೇವೆ ಸಾರ್ಥಕಗೊಳ್ಳುತ್ತದೆ. ವೀರ ಸೈನಿಕರಿಗೆ ಗುರುರಕ್ಷೆ ನೀಡುತ್ತಿರುವುದು ಇಡೀ ಗ್ರಾಮಸ್ಥರು ಸಂತಸವನ್ನುಂಟು ಮಾಡಿದ್ದು, ಅಲ್ಲದೆ ಪ್ರತಿ ವರ್ಷ ಇಂತಹ ಕಾರ್ಯ ನಡೆಯುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಈ ಬಾರಿ ಮತ್ತೊಂದು ವಿಶೇಷತೆ ಎಂದರೆ ಶ್ರೀ ಮಠದ ಸ್ಥಾಪನೆಗೆ ಮೂಲ ಕಾರಣಕರ್ತರಾಗಿರುವ, ಹಿರಿಯರು, ಮಾರ್ಗದರ್ಶಕರು, ಶ್ರೀ ಮಠದ ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯನವರಿಗೆ ಗೌರವ ರಕ್ಷೆ ಹಾಗು ಬಿರುದು ನೀಡಿ ಸನ್ಮಾನಿಸುತ್ತಿರುವುದಾಗಿದೆ. ಶ್ರೀ ಮಠಕ್ಕೆ ಈಶ್ವರಯ್ಯನವರ ಸೇವೆ ಅನನ್ಯವಾಗಿದೆ ಎಂದರು.
ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮೆಲ್ಲರಿಗಾಗಿ ಸೈನಿಕರು ಧರ್ಮ, ಜಾತಿ, ಮತಪಂಥಗಳನ್ನು ಮೀರಿ ತಮ್ಮ ಎಲ್ಲಾ ನೋವುಗಳನ್ನು ನುಂಗಿಕೊಂಡು ಸೇವೆ ಸಲ್ಲಿಸುತ್ತಾರೆ. ಅವರ ಸೇವೆ ಎಷ್ಟು ಸ್ಮರಿಸಿದರೂ ಸಾಲದು. ಯಾವ ದೇಶದಲ್ಲಿ ಸೈನಿಕ ಬಲ ಪ್ರಬಲವಾಗಿರುತ್ತದೆಯೋ ಆ ದೇಶ ಅಭಿವೃದ್ಧಿಯಲ್ಲೂ ಮುನ್ನಡೆ ಕಾಯ್ದುಕೊಂಡಿರುತ್ತದೆ. ನಮ್ಮ ದೇಶದ ಸೈನಿಕರು ವಿಶ್ವದಲ್ಲಿಯೇ ಹೆಚ್ಚು ಬಲಿಷ್ಠರಾಗಿದ್ದಾರೆ. ದೇಶದ ಪ್ರತಿಯೊಂದು ಕುಟುಂಬ ಸಹ ತನ್ನ ಕುಟುಂಬದ ಸದಸ್ಯರೊಬ್ಬರನ್ನು ಸೈನಿಕರನ್ನಾಗಿಸುವ ಗುರಿ ಹೊಂದಬೇಕೆಂದರು.
ಭದ್ರಾವತಿ ತಾಲೂಕಿನ ಬಿಳಿಕಿ ಗ್ರಾಮದಲ್ಲಿ ಶ್ರೀ ನವಿಲೆ ಬಸವೇಶ್ವರ ಸ್ವಾಮಿಯ ಮಹಾರಥೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಬಿಳಿಕಿ ಹಿರೇಮಠದಲ್ಲಿ ಆಯೋಜಿಸಲಾಗಿದ್ದ ದೇವತಾ ಕಾರ್ಯ, ವೀರ ಯೋಧರಿಗೆ ಗೌರವ ಗುರುರಕ್ಷೆ ಹಾಗು ಧಾರ್ಮಿಕ ಪೂಜಾ ಸಮಾರಂಭದಲ್ಲಿ ಮಠದ ಗೌರವಾಧ್ಯಕ್ಷರಾದ ಟಿ.ವಿ ಈಶ್ವರಯ್ಯ ಅವರಿಗೆ ಗುರುರಕ್ಷೆಯೊಂದಿಗೆ ಬಿರುದು ನೀಡಿ ಗೌರವಿಸಲಾಯಿತು.
ಸ್ಟೀಲ್ ಟೌನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ, ಮಾಜಿ ಸೈನಿಕ ಸುಬೇದಾರ್ ಬಿ. ಶ್ರೀನಿವಾಸ್ ಶ್ರೀ ಮಠದ ಗುರುರಕ್ಷೆ ಸ್ವೀಕರಿಸಿ ಮಾತನಾಡಿ, ಸೈನಿಕರಾಗಿರಲಿ ಅಥವಾ ಬೇರೆ ಯಾರೇ ಆಗಿರಲಿ ನಮ್ಮ ಹಿರಿಯುರು ಹೇಳುವ ಮಾತುಗಳನ್ನು ಆಲಿಸುವ ಮೂಲಕ ಸರಿದಾರಿಯಲ್ಲಿ ಸಾಗಬೇಕು. ಪ್ರತಿಯೊಬ್ಬರಿಗೂ ಧರ್ಮ ಬಹಳ ಮುಖ್ಯವಾಗಿದೆ. ಧರ್ಮ ಮಾರ್ಗದಲ್ಲಿ ನಡೆದಾಗ ಮಾತ್ರ ನಮ್ಮ ಬದುಕು ಸಾರ್ಥಕಗೊಳ್ಳುತ್ತದೆ. ಸೈನಿಕರ ಕೊಡುಗೆ ಯಾರು ಸಹ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರಿಗಾಗಿ ಸಮಾಜ ಏನೂ ನೀಡಿದರೂ ಸಹ ಕಡಿಮೆ. ಸಂಘದ ವತಿಯಿಂದ ಹಲವಾರು ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಸೈನಿಕರ ಹಿತಕಾಪಾಡುವುದು ಮೊದಲ ಉದ್ದೇಶವಾಗಿದೆ. ಸಂಘದ ಸದುಪಯೋಗ ಮಾಜಿ ಸೈನಿಕರು ಪಡೆದುಕೊಳ್ಳಬೇಕೆಂದರು.
ಸಂಘದ ಕಾರ್ಯದರ್ಶಿ, ಮಾಜಿ ಸೈನಿಕ ವಿನೋದ ಪೂಜಾರಿ, ಮಾಜಿ ಸೈನಿಕರಾದ ಪೆಟ್ಟಿ ಆಫೀಸರ್ ದಿನೇಶ್ ಕುಮಾರ್, ಸುಬೇದಾರ್ ಜಿ. ಶ್ರೀನಿವಾಸ್, ಹವಾಲ್ದಾರ್ ನೀಲಾ ವೈ.ಪಿ ಪೂಜಾರಿ, ಲಿಯುಟೆನಂಟ್ ಜಿ.ವಿ ಶಾಮಲಾ, ಹವಾಲ್ದಾರ್ ಶಂಕರ್ ಲಿಂಗೇಗೌಡ, ಲಾನ್ಸ್ ನೈಕ್ ಸಂತೋಷ್ ಕುಮಾರ್, ನೈಕ್ ಶೇಖರಯ್ಯ ಮತ್ತು ಹವಾಲ್ದಾರ್ ಮೋಹನ್ ಕುಮಾರ್ ಅವರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.
ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿದ್ದರು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಸಮಾರಂಭ ಉದ್ಘಾಟಿಸಿದರು. ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್ ಕುಮಾರ್, ಶ್ರೀ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸ್ವಾಗತಿಸಿ, ವಾಗೀಶ್ ಕಾರ್ಯಕ್ರಮ ನಿರೂಪಿಸಿದರು.
.jpeg)