ಮಾ.೧೩ರಂದು ನಗರಸಭೆ ಬಜೆಟ್ ಮಂಡನೆ

    ಭದ್ರಾವತಿ : ನಗರಸಭೆ ೨೦೨೬-೨೭ನೇ ಸಾಲಿನ ಆಯ-ವ್ಯಯ ಮಂಡನೆ ಮಾ.೧೩ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಸಭಾಂಗಣದಲ್ಲಿ ನಡೆಯಲಿದೆ. 
    ನಗರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದೆ. ಕೆಲವು ಪ್ರಮುಖ ಕಾಮಗಾರಿಗಳು ವಿಳಂಬವಾಗಿ ಆರಂಭಗೊಂಡರೆ, ಮತ್ತೆ ಕೆಲವು ಕಾಮಗಾರಿಗಳು ಅನುದಾನ ಲಭ್ಯತೆ ಇಲ್ಲದೆ ಇನ್ನೂ ಆರಂಭಗೊಂಡಿಲ್ಲ. ಈ ನಡುವೆ ನಗರಸಭೆಯಲ್ಲಿ ಪ್ರತಿ ವರ್ಷ ಆದಾಯಕ್ಕಿಂತ ಖರ್ಚು ಅಧಿಕವಾಗುತ್ತಿದೆ. 
    ಕುಡಿಯುವ ನೀರು ಪೂರೈಕೆ, ತ್ಯಾಜ್ಯ ನಿರ್ವಹಣೆಗಾಗಿ ಸಾಕಷ್ಟು ಹಣ ವ್ಯಯಿಸಲಾಗುತ್ತಿದೆ. ಆದರೂ ಸಹ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಾ ವಾರ್ಡ್‌ಗಳಲ್ಲೂ ಹಲವಾರು ಸಮಸ್ಯೆಗಳಿದ್ದು, ಈ ಹಿನ್ನಲೆಯಲ್ಲಿ ಈ ಬಾರಿ ಆಯ-ವ್ಯಯ ಗಮನ ಸೆಳೆಯುತ್ತಿದೆ. 
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆ ವಹಿಸಿದ್ದು, ಸದಸ್ಯರು ಸಭೆಗೆ ಆಗಮಿಸಿ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಕೆ.ಎನ್ ಹೇಮಂತ್ ಕೋರಿದ್ದಾರೆ.