ಮಾ.೨೧ರಂದು `ಜೀವಂತ ಶಿಲುಬೆ ಹಾದಿ' ಮಹೋತ್ಸವ

ಭದ್ರಾವತಿ ತಾಲೂಕಿನ ಮಾವಿನಕೆರೆ ಕಿರಿಯ ಪುಷ್ಪ ಸಂತ ತೆರೇಸರ ಚರ್ಚ್ ವತಿಯಿಂದ ಐತಿಹಾಸಿಕ ಶಿಲುಬೆ ಬೆಟ್ಟದ ಮಹೋತ್ಸವ ಜೀವಂತ ಶಿಲುಬೆ ಹಾದಿ ಮಾ.೨೧ರ ಶನಿವಾರ ಆಯೋಜಿಸಲಾಗಿದೆ. ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ನಗರದ ಗಾಂಧಿನಗರ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮಗುರು ಪಾದರ್ ಸ್ಟೀವನ್ ಡೆಸಾ ಸೇರಿದಂತೆ ಇನ್ನಿತರರು ಮಾಹಿತಿ ನೀಡಿದರು. 
ಭದ್ರಾವತಿ: ತಾಲೂಕಿನ ಮಾವಿನಕೆರೆ ಕಿರಿಯ ಪುಷ್ಪ ಸಂತ ತೆರೇಸರ ಚರ್ಚ್ ವತಿಯಿಂದ ಐತಿಹಾಸಿಕ ಶಿಲುಬೆ ಬೆಟ್ಟದ ಮಹೋತ್ಸವ ಜೀವಂತ ಶಿಲುಬೆ ಹಾದಿ ಮಾ.೨೧ರ ಶನಿವಾರ ಆಯೋಜಿಸಲಾಗಿದೆ. 
ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರದ ಗಾಂಧಿನಗರ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮಗುರು ಪಾದರ್ ಸ್ಟೀವನ್ ಡೆಸಾ, ಏಸು ಕ್ರಿಸ್ತನ ಸಾವಿನ ಕೊನೆಯ ಘಟನೆಗಳಿಗೆ ಅಭಿನಯದ ಮೂಲಕ ಜೀವಂತಿಕೆ ತುಂಬುವ ಜೊತೆಗೆ ಏಸು ಕ್ರಿಸ್ತನನ್ನು ಸ್ಮರಿಸಲಾಗುವುದು. ಅಲ್ಲದೆ ಜೀವಂತ ಶಿಲುಬೆ ಹಾದಿಯನ್ನು ವಿಜಯೋತ್ಸವದ ಸಂಕೇತವಾಗಿ ಆಚರಿಸಲಾಗುತ್ತದೆ ಎಂದರು. 
ತ್ಯಾಗ ಮತ್ತು ಭಕ್ತಿಯಿಂದ ಶಿಲುಬೆ ಬೆಟ್ಟದ ಮಹೋತ್ಸವ ಆಚರಿಸಲಾಗುತ್ತದೆ. ತಮ್ಮಲ್ಲಿನ ಕೆಟ್ಟ ಗುಣಗಳನ್ನು ದೂರ ಮಾಡಿ ಸದ್ಗುಣಗಳನ್ನು ಅಳವಡಿಸಿಕೊಳ್ಳುವ ಜೊತೆಗೆ ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಪರಿಶುದ್ಧರಾಗಿ ಸಾಗುವ ಮಾರ್ಗ ಈ ಮಹೋತ್ಸವದಲ್ಲಿ ಭಕ್ತರು ಕಂಡುಕೊಳ್ಳಲಿದ್ದಾರೆ. ಮಹೋತ್ಸವಕ್ಕೆ ಪ್ರತಿ ವರ್ಷ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಅಂದು ಬೆಳಿಗ್ಗೆ ೧೦ಕ್ಕೆ ಪವಿತ್ರ ಜೀವಂತ ಶಿಲುಬೆಯ ಹಾದಿ ಮಹೋತ್ಸವ ದೇವಾಲಯದ ಆವರಣದಲ್ಲಿ ಪ್ರಾರಂಭವಾಗಲಿದೆ. ಮಧ್ಯಾಹ್ನ ೧೨ಕ್ಕೆ ಪ್ರಧಾನ ಯಾಜಕರಾದ ಕಬಳೆ ಧರ್ಮಕೇಂದ್ರದ ಧರ್ಮಗುರುಗಳಾದ ಫಾದರ್ ರೋಮನ್ ಪಿಂಟೋ ಸಹ ಗುರುಗಳೊಂದಿಗೆ ದಿವ್ಯ ಬಲಿಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ ೧ಕ್ಕೆ ಅನ್ನಸಂತರ್ಪಣೆ ಜರುಗಲಿದೆ ಎಂದರು. 
ಮಾವಿನಕೆರೆ ಕಿರಿಯ ಪುಷ್ಪ ಸಂತ ತೆರೇಸರ ಚರ್ಚ್ ಧರ್ಮಗುರು ಪೌಲ್‌ಕ್ರಾಸ್ಟ ಮಾತನಾಡಿ, ಏಸುಕ್ರಿಸ್ತನ ವಿಜಯೋತ್ಸವದ ಆರಾಧನೆ ಇದಾಗಿದೆ. ಈ ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು. 
ಪ್ರಮುಖರಾದ ಅಂತೋಣಿ ವಿಲ್ಸನ್, ನಗರಸಭೆ ಸದಸ್ಯ ಎಂ.ಜಿ ರಾಮಚಂದ್ರ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.