೪ ತಿಂಗಳ ಹಿಂದಿನ ಮನೆಗಳ್ಳತನ ಪ್ರಕರಣ ಭೇದಿಸಿದ ನ್ಯೂಟೌನ್ ಠಾಣೆ ಪೊಲೀಸರು

ಓರ್ವ ಯುವಕ ಬಂಧನ : ೧.೪೦ ಲಕ್ಷ ರು. ಮೌಲ್ಯದ ಸ್ವತ್ತು ವಶ  

ಎಂ. ಸೂರ್ಯ 
    ಭದ್ರಾವತಿ: ಸುಮಾರು ೪ ತಿಂಗಳ ಹಿಂದೆ ನಗರಸಭೆ ವ್ಯಾಪ್ತಿಯ ಜನ್ನಾಪುರದ ಮನೆಯೊಂದರಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣ ಭೇದಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಝೆಪ್ಟೋ ಕಂಪನಿಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿರುವ ಬೆಂಗಳೂರು, ವಿವೇಕ ನಗರ, ಸಂಜೀವಪುರಂ ವನ್ನಾರ್ ಪೇಟೆ ನಿವಾಸಿ ಎಂ. ಸೂರ್ಯ(೨೮) ಬಂಧಿತ ಆರೋಪಿಯಾಗಿದ್ದು, ಕಳ್ಳತನ ಮಾಡಲಾಗಿದ್ದ ಸುಮಾರು ೧.೪೦ ಲಕ್ಷ ರು. ಮೌಲ್ಯದ ೧೦ ಗ್ರಾಂ ತೂಕದ ಬಂಗಾರದ ಸರ ಈತನಿಂದ ವಶಪಡಿಸಿಕೊಳ್ಳಲಾಗಿದೆ.  
    ಜನ್ನಾಪುರ ಎನ್‌ಟಿಬಿ ಕಚೇರಿ ಸಮೀಪ ವಾಸವಾಗಿರುವ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೌಭಾಗ್ಯ ಎಂಬುವರರ ಮನೆಯಲ್ಲಿ ೧೯ ನವೆಂಬರ್ ೨೦೨೫ರಂದು ಮನೆಯ ಡ್ರೆಸ್ಸಿಂಗ್ ಟೇಬಲ್ ಮೇಲೆ ಇಟ್ಟಿದ್ದ ಸುಮಾರು ೧೦ ಗ್ರಾಂ ಬಂಗಾರದ ಸರ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿತ್ತು.
    ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ. ನಿಖಿಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ ಕಾರಿಯಪ್ಪ ಮತ್ತು ರಮೇಶ್‌ರವರ ಮಾರ್ಗದರ್ಶನದಲ್ಲಿ ಹಾಗೂ ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಹಾಗು ಪೊಲೀಸ್ ವೃತ್ತ ನಿರೀಕ್ಷಕಿ ಕೆ. ನಾಗಮ್ಮ.ರವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಟಿ. ರಮೇಶ್ ನೇತೃತ್ವದಲ್ಲಿ ಉಪ ನಿರೀಕ್ಷಕಿ ಕವಿತಾ ಹಾಗೂ ಸಿಬ್ಬಂದಿಗಳಾದ ಟಿ. ನವೀನ್, ಆರ್. ಆದರ್ಶ, ಜಿ.ಕೆ ಪ್ರಕಾಶ್ ಮತ್ತು ಎಚ್. ಪ್ರಸನ್ನರವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಪ್ರಕರಣ ಯಶಸ್ವಿಯಾಗಿ ಭೇದಿಸುವಲ್ಲಿ ತಂಡ ಯಶಸ್ವಿಯಾಗಿದೆ.  ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ತಂಡದ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.