ಸೇತುವೆಯಲ್ಲಿ ಸ್ವಲ್ಪ ಪ್ರಮಾಣದ ನೀರು : ತಡೆಗೋಡೆಗೆ ಸಿಲುಕಿದ ಬಸ್ಸಿನ ಹಿಂಬದಿ ಚಕ್ರ

ತಪ್ಪಿದ ಹೆಚ್ಚಿನ ಅನಾಹುತ : ವೇಗ ನಿಯಂತ್ರಣ ಅಳವಡಿಕೆಗೆ ಕ್ರಮ ಕೈಗೊಳ್ಳಲಿ 

ಭದ್ರಾವತಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಾಗೇಹಳ್ಳ ಸೇತುವೆಗೆ ಬಸ್ ಡಿಕ್ಕಿ ಹೊಡೆದು ಉರುಳಿ ಬಿದ್ದ ಸಂದರ್ಭದಲ್ಲಿ ಸೇತುವೆಯಲ್ಲಿ ನೀರು ಸ್ವಲ್ಪ ಪ್ರಮಾಣದಲ್ಲಿದ್ದು, ಈ ಹಿನ್ನಲೆಯಲ್ಲಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. 
    ಭದ್ರಾವತಿ : ಚಾಲಕನ ನಿಯಂತ್ರಣ ಕಳೆದುಕೊಂಡು ಕಾಗೇಹಳ್ಳ ಸೇತುವೆಗೆ ಬಸ್ ಡಿಕ್ಕಿ ಹೊಡೆದು ಉರುಳಿ ಬಿದ್ದ ಸಂದರ್ಭದಲ್ಲಿ ಸೇತುವೆಯಲ್ಲಿ ನೀರು ಸ್ವಲ್ಪ ಪ್ರಮಾಣದಲ್ಲಿದ್ದು, ಈ ಹಿನ್ನಲೆಯಲ್ಲಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. 
    ಈ ಸೇತುವೆಯಲ್ಲಿ ಬೆಟ್ಟ-ಗುಡ್ಡ, ಹಳ್ಳ-ಕೊಳ್ಳಗಳಿಂದ ಹಾಗು ಜಮೀನಿನ ನೀರು ಹರಿಯುತ್ತದೆ. ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ಮಾತ್ರ ಸೇತುವೆಯ ಅರ್ಧದಷ್ಟು ವನೀರು ಹರಿಯುತ್ತದೆ. ಇಂತಹ ಸಂದರ್ಭದಲ್ಲಿ ಬಸ್ ಸಂಪೂರ್ಣವಾಗಿ ಸೇತುವೆ ಕೆಳಗೆ ಬಿದ್ದಿದ್ದರೆ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು. ಆದರೆ ಈ ದುರ್ಘಟನೆಯಲ್ಲಿ ಬಸ್ ಸಂಪೂರ್ಣವಾಗಿ ಕೆಳಗೆ ಬಿದ್ದಿಲ್ಲ. ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಹಿಂಬದಿ ಚಕ್ರ ತಡೆಗೋಡೆಗೆ ಸಿಲುಕಿಕೊಂಡಿದೆ. ಈ ಹಿನ್ನಲೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎನ್ನಲಾಗಿದೆ. 
    ಬಸ್ಸಿನ ಚಾಲಕ ಪ್ರಸಾದ್ ಗಾಯಗೊಂಡಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಚೇತರಿಕೆ ನಂತರ ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬರಲಿದೆ. 
    ಭದ್ರಾವತಿ ನಗರದಿಂದ ಹೊಳೆಹೊನ್ನೂರು, ಚನ್ನಗಿರಿ, ದಾವಣಗೆರೆ, ಚಿತ್ರದುರ್ಗ ಭಾಗಗಳಿಗೆ ಈ ವ್ಯಾಪ್ತಿಯಲ್ಲಿ ಹೆಚ್ಚಿನ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಈ ರೀತಿಯ ದುರ್ಘಟನೆಗಳು ಈ ಹಿಂದೆ ಸಹ ನಡೆದಿವೆ. ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಸಾರಿಗೆ ಅಧಿಕಾರಿಗಳು ಸಂಚಾರಿ ಪೊಲೀಸರ ನೆರವಿನೊಂದಿಗೆ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ವೇಗ ನಿಯಂತ್ರಣ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕಾಗಿದೆ.