ಸದಸ್ಯತ್ವ ಅಭಿಯಾನಕ್ಕೆ ಕೈಜೋಡಿಸಿ ಸಂಘಟನೆ ಬಲಪಡಿಸಿ : ಬಿ.ಎ ಮಂಜುನಾಥ್
ಭದ್ರಾವತಿಯಲ್ಲಿ ಬಾಪೂಜಿ ಹರಿಜನ ಮಾದರ ಸೇವಾ ಸಂಘದ ವತಿಯಿಂದ ನಗರಸಭೆ ವ್ಯಾಪ್ತಿಯ ಜಿಂಕಲೈನ್ ಮತ್ತು ಹುತ್ತಾಕಾಲೋನಿ ಭಾಗದ ಸರ್ವಸದಸ್ಯರ ಸಭೆ ಏರ್ಪಡಿಸಲಾಗಿತ್ತು.
ಭದ್ರಾವತಿ: ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯ ಪಡೆಯುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಕೈಜೋಡಿಸುವ ಮೂಲಕ ಸಂಘಟನೆ ಬಲಗೊಳಿಸಬೇಕೆಂದು ನಗರದ ಬಾಪೂಜಿ ಹರಿಜನ ಮಾದರ ಸೇವಾ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಮನವಿ ಮಾಡಿದರು.
ಅವರು ನಗರಸಭೆ ವ್ಯಾಪ್ತಿಯ ಜಿಂಕಲೈನ್ ಮತ್ತು ಹುತ್ತಾಕಾಲೋನಿ ಭಾಗದ ಸರ್ವಸದಸ್ಯರ ಸಭೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಈಗಾಗಲೇ ಸುಮಾರು ೧೫೬ ಕುಟುಂಬಗಳು ಸಂಘದ ಸದಸ್ಯತ್ವ ಪಡೆದುಕೊಂಡಿವೆ. ಮುಂದಿನ ದಿನಗಳಲ್ಲಿ ಬೊಮ್ಮನಕಟ್ಟೆ, ಸಂಜೀವನಗರ, ಸೀಗೆಬಾಗಿ ಗ್ರಾಮಗಳಲ್ಲೂ ಸಹ ಸದಸ್ಯತ್ವ ಅಭಿಯಾನ ನಡೆಸಲಾಗುವುದು ಎಂದರು.
ಸಂಘದಲ್ಲಿ ಸದಸ್ಯತ್ವ ಹೊಂದಿರುವವರು ಒಂದು ವೇಳೆ ಮೃತಪಟ್ಟಲ್ಲಿ ಅವರ ಕುಟುಂಬಸ್ಥರಿಗೆ ಅಂತ್ಯಸಂಸ್ಕಾರಕ್ಕೆ ೫ ಸಾವಿರ ರು. ಆರ್ಥಿಕ ನೆರವು ನೀಡಲಾಗುವುದು. ಅಲ್ಲದೆ ಸಂಘದಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಸಭೆಯಲ್ಲಿ ಹಿರಿಯ ದಲಿತ ನಾಯಕ ಎಚ್.ಎನ್ ಶ್ರೀನಿವಾಸ್ ಮಾತನಾಡಿ, ಸಂಘದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಮತ್ತು ಸಮಾಜದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನೆರವಾಗಲು ಪತ್ತಿನ ಸಹಕಾರ ಸಂಘ ಸ್ಥಾಪಿಸಬೇಕೆಂದು ಸಲಹೆ ವ್ಯಕ್ತಪಡಿಸಿದರು.
ಮತ್ತೊಬ್ಬ ದಲಿತ ಮುಂಖಂಡ ಮಾರುತಿ ಸಂಘ ಬೆಳೆದು ಬಂದಿದ್ದನ್ನು ಸ್ಮರಿಸಿದರು. ಸಮಾಜದ ಬಡ ವಿದ್ಯಾರ್ಥಿಗಳ ನೆರವಿಗೆ ಮುಂದಾಗುವ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ದಲಿತ ಮುಖಂಡರಾದ ಬಸವರಾಜಪ್ಪ, ಹುಚ್ಚಣ್ಣ, ಶಂಕರಪ್ಪ, ಅಂಜಿನಿ, ಶ್ರೀಕಾಂತ್, ನರಸಿಂಹಪ್ಪ, ರವಿ ಮತ್ತು ರಾಜಶೇಖರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ರಾಜು ಮತ್ತು ನರಸಯ್ಯ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಸ್ವಾಗತಿಸಿ, ವೈ.ಕೆ ಮಂಜುನಾಥ್ ವಂದಿಸಿದರು.