ಜಮೀನಿಗೆ ನುಗ್ಗಿ ಜಾತಿ ನಿಂದನೆ, ಹಲ್ಲೆ, ಜೀವ ಬೆದರಿಕೆ ಪ್ರಕರಣ

6 ಮಂದಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ, 1.74 ಲಕ್ಷ ರು. ದಂಡ 

    ಭದ್ರಾವತಿ : ಸುಮಾರು 6 ವರ್ಷಗಳ ಹಿಂದಿನ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಮಂದಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ ಹಾಗು 1,74 ಲಕ್ಷ ರು. ದಂಡ ವಿಧಿಸಿ ನಗರದ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 
    ತಾಲೂಕಿನ ಲಕ್ಷ್ಮೀಪುರ ಗ್ರಾಮದ ಭೋವಿ ಜಾತಿಯ ಸೀನಪ್ಪ ಎಂಬುವರಿಗೆ ಸೇರಿದ ಸರ್ವೆ ನಂ.37/1 ಮತ್ತು 37/6ರ ಜಮೀನಿನಲ್ಲಿ ೨೮ ಜುಲೈ ೨೦೨೦ರಂದು ಇದೆ ಗ್ರಾಮದ ಒಕ್ಕಲಿಗ ಜಾತಿಗೆ ಸೇರಿದ ಕೆಂಪಮ್ಮ, ಗೌತಮಿ, ನಾಗರಾಜ, ರಾಘವೇಂದ್ರ, ಬೇಬಿಯಮ್ಮ, ಲಕ್ಷ್ಮಮ್ಮ ಮತ್ತು ದೇವೇಂದ್ರರವರು ಏಕಾಏಕಿ ನುಗ್ಗಿ ಸೀನಪ್ಪ ಹಾಗು ಇವರ ಕುಟುಂಬಸ್ಥರು ಮತ್ತು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕೆಲಸಗಾರರಿಗೆ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು. 
    ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್. ನಾಯ್ಕರವರು ಪ್ರಕಣದ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಿದ್ದರು. 
    ವಿಚಾರಣೆ ನಡೆಸಿದ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಆರೋಪ ಸಾಬೀತಾದ ಹಿನ್ನಲೆಯಲ್ಲಿ 6 ಮಂದಿಗೆ ತಲಾ 2 ವರ್ಷ ಕಠಿಣ ಶಿಕ್ಷೆ ಮತ್ತು 1.74 ಲಕ್ಷ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.