ಯುಗಾದಿ ಹಬ್ಬ ಆಚರಣೆ : ಜೂಜಾಟಕ್ಕೆ ಕಡಿವಾಣ ಹಾಕಿ

ಪೊಲೀಸ್ ಇಲಾಖೆಗೆ ಬಿಎನ್ ರಾಜು ಆಗ್ರಹ 

ಬಿ.ಎನ್ ರಾಜು
    ಭದ್ರಾವತಿ: ಯುಗಾದಿ ಹಬ್ಬಕ್ಕೆ ತನ್ನದೇ ಆದ ಪರಂಪರೆ ಇದ್ದು, ಧಾರ್ಮಿಕ ಶ್ರೇಷ್ಠತೆ ಹೊಂದಿದೆ. ದೇಶದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಈ ಹಬ್ಬವನ್ನು ಬೇವು-ಬೆಲ್ಲ ಸವಿಯುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ. ಕ್ಷೇತ್ರದಲ್ಲಿ ಈ ಪವಿತ್ರ ಹಬ್ಬವನ್ನು ಜೂಜಾಟಕ್ಕೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪೊಲೀಸ್ ಇಲಾಖೆ ತಕ್ಷಣ ಜೂಜಾಟಕ್ಕೆ ಕಡಿವಾಣ ಹಾಕಲು ಮುಂದಾಗಬೇಕೆಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಗ್ರಹಿಸಿದ್ದಾರೆ. 
    ಭಾರತ ದೇಶ ಬಹುಸಂಸ್ಕೃತಿಯ ಜಾತ್ಯಾತೀತಿ ದೇಶವಾಗಿದ್ದು, ಯುಗಾದಿ ಹಬ್ಬ ಅತ್ಯಂತ ಶ್ರೇಷ್ಠತೆಯನ್ನು ಹೊಂದಿದೆ. ಅಲ್ಲದೆ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬ ಇದಾಗಿದೆ. ಸೌಹಾರ್ದತೆ, ಸಮಾನತೆಯಿಂದ ದೇಶದ ಎಲ್ಲಾ ವರ್ಗದ ಜನರು ಆಚರಿಸುತ್ತಾರೆ. ಇಂತಹ ಹಬ್ಬದ ಸಂದರ್ಭದಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ, ವಾರ್ಡ್‌ಗಳಲ್ಲಿ ಅನೇಕ ವರ್ಷಗಳಿಂದಲೂ ಸುಮಾರು ವಾರಗಟ್ಟಲೆ ಶಾಮಿಯಾನ ಹಾಕಿಕೊಂಡು ಇಸ್ಪೀಟ್ ಸೇರಿದಂತೆ ಇನ್ನಿತರ ಜೂಜಾಟಗಳಲ್ಲಿ ತೊಡಗುತ್ತಿರುವುದು ಪವಿತ್ರವಾದ ಹಬ್ಬದ ಆಚರಣೆಗೆ ಮಾಡುತ್ತಿರುವ ಅಪಚಾರವಾಗಿದೆ. ಅಲ್ಲದೆ ಅನೇಕ ಜನಪ್ರತಿನಿಧಿಗಳು, ಊರಿನ ಮುಖಂಡರು ಇಸ್ಪೀಟ್ ಸೇರಿದಂತೆ ಇನ್ನಿತರ ಜೂಜಾಟದಲ್ಲಿ ಮುಂಚೂಣಿಯಲ್ಲಿದ್ದು, ಯುಗಾದಿ ಹಬ್ಬ ಜೂಜಾಟಕ್ಕೆ ಮೀಸಲಾದ ಹಬ್ಬ ಎಂಬ ತಪ್ಪು ಸಂದೇಶ ರವಾನಿಸಲಾಗುತ್ತಿದೆ ಎಂದು ರಾಜು ಕಿಡಿಕಾರಿದ್ದಾರೆ. 
    ಕೆಲವು ದಂಧೆಕೋರರು ಈ ಹಬ್ಬದ ಸಂದರ್ಭದಲ್ಲಿ ಜೂಜಾಟದ ಮೂಲಕ ಹಣ ದೋಚುತ್ತಿದ್ದು, ಕೂಲಿ ಕಾರ್ಮಿಕರು, ಬಡ ರೈತರು, ಆಟೋ ಚಾಲಕರು, ಬೀದಿ ವ್ಯಾಪಾರಿಗಳು ಹಣ ಕಳೆದುಕೊಳ್ಳುತ್ತಿದ್ದಾರೆ. ಬಡವರ ಮನೆಯಲ್ಲಿ ಕನಿಷ್ಠ ಹೋಳಿಗೆ ಒಬ್ಬಟ್ಟನ್ನು ಸಹ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಇರುವ ಮಹಿಳೆಯರು ಮತ್ತು ಮಕ್ಕಳು ಹಬ್ಬದ ದಿನಗಳಲ್ಲಿ ಉಪವಾಸ ಅನುಭವಿಸುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಯುಗಾದಿ ಹಬ್ಬಕ್ಕೆ ಜೂಜಾಟ ನಡೆಸಲು ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲ. ಪೋಲಿಸ್ ಇಲಾಖೆ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ೨೦೦೩ರಲ್ಲಿ ಜಿಲ್ಲಾ ರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್‌ರವರು ಈ ಜೂಜಾಟಕ್ಕೆ ಕಡಿವಾಣ ಹಾಕಿದ್ದರು. ಈ ಹಿನ್ನಲೆಯಲ್ಲಿ ಅನೇಕ ಬಡ ಜನರು ನಿಟ್ಟುಸಿರು ಬಿಟ್ಟಿದ್ದರು. ಯುಗಾದಿ ಹಬ್ಬ ಸಂಭ್ರಮದಿಂದ ಆಚರಿಸಿದ್ದರು ಎಂದು ರಾಜು ಮನವರಿಕೆ ಮಾಡಿದ್ದಾರೆ. 
    ಈ ಬಾರಿ ಯುಗಾದಿ ಹಬ್ಬದ ಜೊತೆಗೆ ರಂಜಾನ್ ಹಬ್ಬ ಸಹ ಬಂದಿರುವುದರಿಂದ ಸೂಕ್ಷ್ಮ ವಿಚಾರವಾಗಿದ್ದು, ಪೊಲೀಸ್ ಇಲಾಖೆ ಮುಂಜಾಗ್ರತೆವಹಿಸುವ ಜೊತೆಗೆ ಹಬ್ಬದ ಆಚರಣೆ ಕುರಿತು ಪೋಲಿಸ್ ವಾಹನಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಜೊತೆಗೆ ಕಾನೂನಿನ ಅರಿವು ಮೂಡಿಸಿ ಜೂಜಾಟಕ್ಕೆ ಕಡಿವಾಣ ಹಾಕಬೇಕೆಂದು ರಾಜು ಒತ್ತಾಯಿಸಿದ್ದಾರೆ.