ನೂತನ ಜಾಹೀರಾತು ನೀತಿ ತಕ್ಷಣ ಸ್ಥಗಿತಗೊಳಿಸಿ, ಮರುಪರಿಶೀಲಿಸಿ : ಗಂಗಾನಾಯ್ಕ ಗೊಂದಿ
ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆ ಮೇರೆಗೆ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪಾಲಿಗೆ ಮರಣ ಶಾಸನದಂತಿರುವ ನೂತನ ಜಾಹೀರಾತು ನೀತಿ ೨೦೨೬ರ ಜಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಮರು ಪರಿಶೀಲಿಸುವಂತೆ ಭದ್ರಾವತಿಯಲ್ಲಿ ತಾಲೂಕು ಘಟಕದ ವತಿಯಿಂದ ಸೋಮವಾರ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ಕರ್ನಾಟಕ ರಾಜ್ಯ ಸರಕಾರವು ಇತ್ತೀಚೆಗೆ ತನ್ನ ಸಂಪುಟ ಸಭೆಯಲ್ಲಿ ಅನುಮೋದಿಸಿರುವ ನೂತನ ಜಾಹೀರಾತು ನೀತಿ ೨೦೨೬ ಸಣ್ಣ ಪತ್ರಿಕೆಗಳ ಪಾಲಿಗೆ ಮರಣ ಶಾಸನವಾಗಿದ್ದು, ಇದು ಯಥಾವತ್ತಾಗಿ ಜಾರಿಗೆ ಬಂದಲ್ಲಿ ಸ್ಥಳೀಯ ಪತ್ರಿಕೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಗಂಭೀರ ಅಪಾಯವನ್ನು ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ನೂತನ ಜಾಹೀರಾತು ನೀತಿ ೨೦೨೬ರ ಜಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಮರು ಪರಿಶೀಲಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಗಂಗಾನಾಯ್ಕ ಗೊಂದಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದರು.
ಅವರು ಸೋಮವಾರ ರಾಜ್ಯ ಸಂಘದ ಸೂಚನೆ ಮೇರೆಗೆ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪಾಲಿಗೆ ಮರಣ ಶಾಸನದಂತಿರುವ ನೂತನ ಜಾಹೀರಾತು ನೀತಿ ೨೦೨೬ರ ಜಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಮರು ಪರಿಶೀಲಿಸುವಂತೆ ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈ ನೀತಿಯ ಕೆಲವು ಅಂಶಗಳ ಬಗೆಗೆ ಸ್ಪಷ್ಟತೆ ಇಲ್ಲದೆ ಇರುವುದರಿಂದ ಹಾಗೂ ವಾಸ್ತವತೆಗೆ ಹೊಂದಿಕೆಯಾಗದೆ ಇರುವುದರಿಂದ ಈ ನೀತಿಯು ಪತ್ರಕರ್ತರಿಗೆ ಹೊರಲಾರದ ಆರ್ಥಿಕ ಹೊರೆಯಾಗಲಿದೆ.
ಸಣ್ಣ ಪತ್ರಿಕೆಗಳು ಮತ್ತು ಸ್ಥಳೀಯ ಮಾಧ್ಯಮಗಳು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಈಗಲೇ ಸಾಕಷ್ಟು ಕಷ್ಟಪಡುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದ್ದು, ಇದರೊಂದಿಗೆ ನೂತನ ಜಾಹೀರಾತು ನೀತಿಯು ನಿರ್ವಹಿಸಲು ಅಸಾಧ್ಯವೆನಿಸುವಷ್ಟು ಅಡಚಣೆಗಳನ್ನು ತಂದೊಡ್ಡಲಿದೆ. ಆದುದರಿಂದ, ಈ ನೂತನ ಜಾಹೀರಾತು ನೀತಿಯನ್ನು ತತ್ಕಾಲಕ್ಕೆ ಜಾರಿಗೆ ತರದೆ ವ್ಯಾಪಕ ಚರ್ಚೆ ಹಾಗೂ ಕಾರ್ಯ ಸಾಧ್ಯವಾದ ನೀತಿಯ ಮೂಲಕ ಮರುನಿರೂಪಣೆಯ ನಂತರ ಜಾರಿಗೊಳಿಸಬೇಕೆಂದು ಈ ಮೂಲಕ ವಿನಂತಿಸುತ್ತೇವೆ ಎಂದರು.
ಸಂಘದ ಉಪಾಧ್ಯಕ್ಷ ಜಿ. ಸುಭಾಷ್‌ರಾವ್ ಸಿಂಧ್ಯಾ, ಪ್ರಧಾನ ಕಾರ್ಯದರ್ಶಿ ಬಸವರಾಜ, ಕಾರ್ಯದರ್ಶಿ ಅನಂತಕುಮಾರ್, ಖಜಾಂಚಿ ಫಿಲೋಮಿನಾ .ಆರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್. ಬಾಬು, ಬಿ.ಆರ್ ಬದರಿನಾರಾಯಣ ಶ್ರೇಷ್ಠಿ, ಎಚ್.ಕೆ ಶಿವಶಂಕರ್, ಎಚ್. ಶೈಲೇಶ್ ಕೋಠಿ, ಸದಸ್ಯರಾದ ಸುದರ್ಶನ್, ಕೆ.ಎನ್ ರವೀಂದ್ರನಾಥ್, ಕೆ.ಇ ಪ್ರಶಾಂತ್, ಜಿ. ರಾಜು, ಸೈಯದ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
