ಮಾ.೪ರಂದು ಸುರಕ್ಷಾ ಜೀವನ ವೃದ್ಧಾಶ್ರಮ, ಅನಾಥಾಶ್ರಮದ ವಾರ್ಷಿಕೋತ್ಸವ
ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸುರಕ್ಷಾ ಜೀವನ ಸೇವಾ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಮಾತನಾಡಿದರು.
ಭದ್ರಾವತಿ : ನಗರದ ನ್ಯೂಟೌನ್ ಮೆಸ್ ಸರ್ಕಲ್ ಸಮೀಪದ ಸುರಕ್ಷಾ ಜೀವನ ಸೇವಾ ಟ್ರಸ್ಟ್ ವತಿಯಿಂದ ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ ವಾರ್ಷಿಕೋತ್ಸವ ಮಾ.೪ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ತಿಳಿಸಿದರು.
ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೫ ವರ್ಷಗಳಿಂದ ಟ್ರಸ್ಟ್ ವತಿಯಿಂದ ವೃದ್ಧಾಶ್ರಮ ಮತ್ತು ಅನಾಥಾಶ್ರಮ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಟ್ರಸ್ಟ್ ಸೇವಾ ಕಾರ್ಯಕ್ಕೆ ಹೆಚ್ಚಿನ ಸಹಕಾರ ಎಲ್ಲೆಡೆ ಲಭಿಸುತ್ತಿದೆ ಎಂದರು.
ಟ್ರಸ್ಟ್ ವಯೋವೃದ್ಧರು ಹಾಗು ಅನಾಥರ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತದೆ. ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸೇವಾ ಮನೋಭಾವ ಹೊಂದಿರುವ ಕಾರ್ಯಕರ್ತರು ಯಾವುದೇ ಫಲಾಫೇಕ್ಷೆ ಇಲ್ಲದೆ ಕುಟುಂಬ ಸದಸ್ಯರಂತೆ ಒಗ್ಗಟ್ಟಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತುಂಬಾ ಉತ್ತಮವಾದ ವಾತಾವರಣದಲ್ಲಿ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯವಿರುವ ಸೌಕರ್ಯಗಳನ್ನು ಹೊಂದಿದೆ. ಜನಪ್ರತಿನಿಧಿಗಳು, ದಾನಿಗಳು ಸೇರಿದಂತೆ ಸಮಾಜದ ಪ್ರತಿಯೊಬ್ಬರು ಹೆಚ್ಚಿನ ಸಹಕಾರ ನೀಡುವ ಮೂಲಕ ವೃದ್ದರು, ಅನಾಥರ ನೆರವಿಗೆ ಮುಂದಾಗಬೇಕೆಂದು ಮನವಿ ಮಾಡಿದರು.
ಮಾ.೪ರಂದು ನಡೆಯಲಿರುವ ವಾರ್ಷಿಕೋತ್ಸವ ಸಮಾರಂಭವನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸುವರು. ಇನ್ನಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಟ್ರಸ್ಟ್ ಖಜಾಂಚಿ ಸೋಮಶೇಖರ್, ಪ್ರಮುಖರಾದ ಶಾರದ ಕುಮಾರಿ, ಶಕುಂತಲಾ ಪ್ರದೀಪ್, ಜಾಹ್ನವಿ ರೆಡ್ಡಿ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.