ಕಾಗೇಹಳ್ಳ ಗ್ರಾಮದ ಸೇತುವೆಗೆ ಉರುಳಿ ಬಿದ್ದ ಖಾಸಗಿ ಬಸ್ : ೩೦ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಭದ್ರಾವತಿ ತಾಲೂಕಿನ ಕಾಗೇಹಳ್ಳ ಗ್ರಾಮದ ಸೇತುವೆಗೆ ಖಾಸಗಿ ಬಸ್ ಉರುಳಿ ಬಿದ್ದ ಪರಿಣಾಮ ಸುಮಾರು ೩೦ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. 
          ಭದ್ರಾವತಿ : ತಾಲೂಕಿನ ಕಾಗೇಹಳ್ಳ ಗ್ರಾಮದ ಸೇತುವೆಗೆ ಖಾಸಗಿ ಬಸ್ ಉರುಳಿ ಬಿದ್ದ ಪರಿಣಾಮ ಸುಮಾರು ೩೦ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. 
    ಶ್ರೀ ರೇಣುಕಾಂಬ ಟ್ರಾವೆಲ್ಸ್ ಮಾಲೀಕತ್ವದ ಖಾಸಗಿ ಬಸ್ ದಾವಣಗೆರೆಯಿಂದ ಭದ್ರಾವತಿ ನಗರಕ್ಕೆ ಆಗಮಿಸುತ್ತಿದ್ದಾಗ ಕಾಗೇಹಳ್ಳ ಗ್ರಾಮದ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಬಸ್ ಮಧ್ಯಾಹ್ನ ಸುಮಾರು ೧.೩೦ರ ಸಮಯದಲ್ಲಿ ಸೇತುವೆಗೆ ಉರುಳಿ ಬಿದ್ದಿದೆ. ಅಪಘಾತ ಸಂದರ್ಭದಲ್ಲಿ ಬಸ್ಸಿನಲ್ಲಿ ಒಟ್ಟು ೩೫ ಪ್ರಯಾಣಿಕರಿದ್ದರು ಎಂದು ಎನ್ನಲಾಗಿದೆ.  
    ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಪೈಕಿ  ಗಂಭೀರವಾಗಿ ಗಾಯಗೊಂಡಿರುವ ಸುಮಾರು ೧೭ಕ್ಕೂ ಹೆಚ್ಚು ಪ್ರಯಾಣಿಕರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ಗ್ರಾಮಾಂತರ ಠಾಣೆ ಪೊಲೀಸರು ಹಾಗು ಅಗ್ನಿಶಾಮಕದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ. 
    ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ಗ್ರಾಮಾಂತರ ಪೊಲೀಸ್ ಠಾಣೆ ಉಪ ನಿರೀಕ್ಷಕರು ಸೇರಿದಂತೆ ಇನ್ನಿತರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
 

ಭದ್ರಾವತಿ ತಾಲೂಕಿನ ಕಾಗೇಹಳ್ಳ ಗ್ರಾಮದ ಸೇತುವೆಗೆ ಖಾಸಗಿ ಬಸ್ ಉರುಳಿ ಬಿದ್ದ ಪರಿಣಾಮ ಸುಮಾರು ೩೦ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.