ಪರಿಶುದ್ಧವಾದ ಕುಡಿಯುವ ನೀರು ಸರಬರಾಜು : ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ
ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಮನವಿಗೆ ಸಂಸದರ ಸ್ಪಂದನೆ
ಸಂಸದ ಬಿ.ವೈ ರಾಘವೇಂದ್ರ
ಭದ್ರಾವತಿ : ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದೊಣಬಘಟ್ಟ ಮತ್ತು ಬಿಳಿಕಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಪರಿಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡಲು ಭದ್ರಾ ನದಿಯಿಂದ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಬಿ.ವೈ ರಾಘವೇಂದ್ರರವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಸಂಬಂಧ ಸಂಸದರಿಗೆ ಜನ್ನಾಪುರ ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಛೇರ್‍ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮನವಿ ಸಲ್ಲಿಸಿದ್ದರು.
ಕಳೆದ ಸುಮಾರು ೫೦ ವರ್ಷಗಳಿಂದ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಹೋರಾಟದ ಸ್ಮರಣೆಗಾಗಿ ಗ್ರಾಮೀಣೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಇದಕ್ಕೆ ಪೂರಕವಾಗಿ ವಿಧಾನಸಭಾ ಕ್ಷೇತ್ರದ ದೊಣಬಘಟ್ಟ ಹಾಗೂ ಬಿಳಿಕಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಪರಿಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವುದು.
ಪ್ರಸ್ತುತ ದೊಣಬಘಟ್ಟ ಮತ್ತು ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಬಿಳಿಕಿ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ಈ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿರುವುದರಿಂದ ಹಾಗು ಸುತ್ತಮುತ್ತಲಿನ ಜಮೀನುಗಳಿಂದ ರಾಸಾಯನಿಕ ಮಿಶ್ರಿತ ನೀರು ಸೇರ್ಪಡೆಗೊಳ್ಳುತ್ತಿರುವುದರಿಂದ ಕೆರೆಯ ನೀರು ಕಲ್ಮಶಗೊಳ್ಳುತ್ತಿದೆ. ಈ ನೀರಿನ ಬಳಕೆಯಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈ ನಡುವೆ ಗ್ರಾಮಸ್ಥರು ದೂರದ ನಗರ ಪ್ರದೇಶದ ಕುಡಿಯುವ ನೀರನ್ನು ಅವಲಂಬಿಸುವಂತಾಗಿದೆ. ಗ್ರಾಮಸ್ಥರು ನಗರ ಪ್ರದೇಶಕ್ಕೆ ಬಂದು ಹೋಗಲು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆಂದು ವೇಣುಗೋಪಾಲ್ ಮನವಿಯಲ್ಲಿ ವಿವರಿಸಿದ್ದರು.
ನಗರಸಭೆ ವ್ಯಾಪ್ತಿಯ ಕಾಗದನಗರ ಸಮೀಪದ ಭದ್ರಾ ನದಿಯಿಂದ ದೊಣಬಘಟ್ಟ ಮತ್ತು ಬಿಳಿಕಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಪರಿಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡಬಹುದಾಗಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಹಾಗು ತಾಲೂಕಿನ ವಿವಿಧ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಹೆಚ್ಚುವರಿ ಕುಡಿಯುವ ನೀರಿನ ಟ್ಯಾಂಕ್‌ಗಳು, ಪೈಪ್‌ಲೈನ್ ಅಳವಡಿಕೆ ಮತ್ತು ಫಿಲ್ಟರ್ ಪಂಪ್‌ಹೌಸ್ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸುವಂತೆ ಸಂಸದರಿಗೆ ವೇಣುಗೋಪಾಲ್ ಕೋರಿದ್ದರು.
ಮನವಿಗೆ ಸ್ಪಂದಿಸಿರುವ ಸಂಸದರು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮಾ.೨೦ರಂದು ಪತ್ರ ಬರೆದಿದ್ದು, ಸಂಸದರ ಪತ್ರಕ್ಕೆ ತಕ್ಷಣ ಸ್ಪಂದಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ವರದಿ ಸಲ್ಲಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸದ್ದಾರೆ.