ದ್ವಿಚಕ್ರ ವಾಹನದ ಮೇಲೆ ಜೋಳ ತುಂಬಿದ ಲಾರಿ ಹರಿದು ದಂಪತಿ ಸಾವು
ಭದ್ರಾವತಿ ತಾಲೂಕಿನ ಬಿ.ಆರ್.ಪಿ ಶಂಕರಘಟ್ಟದ ಹುಣಸೆಕಟ್ಟೆ ಜಂಕ್ಷನ್ ಸಮೀಪ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ದಂಪತಿ ಸಾವು ಕಂಡಿರುವ ಘಟನೆ ನಡೆದಿದೆ.
ಭದ್ರಾವತಿ: ತಾಲೂಕಿನ ಬಿ.ಆರ್.ಪಿ ಶಂಕರಘಟ್ಟದ ಹುಣಸೆಕಟ್ಟೆ ಜಂಕ್ಷನ್ ಸಮೀಪ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ದಂಪತಿ ಸಾವು ಕಂಡಿರುವ ಘಟನೆ ನಡೆದಿದೆ.
ತರೀಕೆರೆ ತಾಲೂಕಿನ ನಿವಾಸಿಗಳಾದ ಶಿವಮೊಗ್ಗದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ಬಾಬು(೩೧) ಮತ್ತು ಸಾವಿತ್ರಿ (೨೫) ದಂಪತಿ ಅಪಘಾತದಲ್ಲಿ ಸಾವು ಕಂಡಿದ್ದಾರೆ.
ಶಿವಮೊಗ್ಗದಿಂದ ತರೀಕೆರೆಯ ತಮ್ಮ ಮನೆಗೆ ತೆರಳುತ್ತಿದ್ದ ದಂಪತಿಯ ದ್ವಿಚಕ್ರ ವಾಹನದ ಮೇಲೆ ಜೋಳ ತುಂಬಿದ ಲಾರಿ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಶಿವಮೊಗ್ಗದಿಂದ ಜೋಳ ತುಂಬಿದ ಲಾರಿ ಹುಣಸೆಕಟ್ಟೆ ಜಂಕ್ಷನ್ ಸಮೀಪ ಎತ್ತರದ ರಸ್ತೆಯಲ್ಲಿ ಮುಂದೆ ಚಲಿಸಲು ಸಾಧ್ಯವಾಗದೆ ಏಕಾಏಕಿ ಹಿಂದಕ್ಕೆ ಬಂದಿದ್ದು, ಈ ಹಿನ್ನಲೆಯಲ್ಲಿ ಹಿಂಬದಿಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಹರಿದಿದೆ.
ಸುಮಾರು ಒಂದೂವರೆ ವರ್ಷದ ಹಿಂದೆ ಬಾಬು ಮತ್ತು ಸಾವಿತ್ರಿ ಪ್ರೀತಿಸಿ ವಿವಾಹವಾಗಿದ್ದರು. ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.