ಗುರು-ಹಿರಿಯರನ್ನು ಗೌರವಿಸುವ, ಅವರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ನೆಮ್ಮದಿ : ಬಿ.ಕೆ ಶಿವಕುಮಾರ್

ಭದ್ರಾವತಿ ನಗರದ ನ್ಯೂಟೌನ್ ಮೆಸ್ ಸರ್ಕಲ್ ಸಮೀಪದ ಸುರಕ್ಷಾ ಜೀವನ ಸೇವಾ ಟ್ರಸ್ಟ್ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ ೫ನೇ ವರ್ಷದ ವಾರ್ಷಿಕೋತ್ಸವ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ) ಅಧ್ಯಕ್ಷ ಬಿ.ಕೆ ಶಿವಕುಮಾರ್ ಉದ್ಘಾಟಿಸಿದರು. 
    ಭದ್ರಾವತಿ: ಗುರು-ಹಿರಿಯರನ್ನು ಗೌರವಿಸುವ ಹಾಗು ಅವರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಅಲ್ಲದೆ ಹಿರಿಯರು ಅನಾಥಾಶ್ರಮಗಳನ್ನು ಅವಲಂಬಿಸುವ ಅಗತ್ಯತೆ ಇರುವುದಿಲ್ಲ ಎಂದು ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ) ಅಧ್ಯಕ್ಷ ಬಿ.ಕೆ ಶಿವಕುಮಾರ್ ಹೇಳಿದರು. 
    ಅವರು ಬುಧವಾರ ನಗರದ ನ್ಯೂಟೌನ್ ಮೆಸ್ ಸರ್ಕಲ್ ಸಮೀಪದ ಸುರಕ್ಷಾ ಜೀವನ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ ೫ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. 
    ಇಂದಿನ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಅಗತ್ಯವಿದೆ. ಮನೆಗಳಲ್ಲಿ ಗುರು-ಹಿರಿಯರನ್ನು ಗೌರವಿಸುವ ಹಾಗು ಅವರ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಹ ವಾತಾವರಣನಿರ್ಮಿಸಿಕೊಳ್ಳಬೇಕಾಗಿದೆ ಎಂದರು. 
    ಅನಿವಾರ್ಯ ಕಾರಣಗಳಿಂದ ವೃದ್ಧಾಶ್ರಮಕ್ಕೆ ಬರುವ ಹಿರಿಯರನ್ನು ತಮ್ಮ ಕುಟುಂಬ ಸದಸ್ಯರಂತೆ ಕಾಣುವ ಮೂಲಕ ಅವರ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಮನವಿ ಮಾಡಿದರು. 
    ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಮಾತನಾಡಿ, ಇಂದಿನ ವಿದ್ಯಾವಂತ ಸಮಾಜದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಅಪ್ಪ-ಅವ್ವ, ಅಣ್ಣ-ತಂಗಿ ಯಾವುದೇ ಸಂಬಂಧಗಳನ್ನು ಸಹ ಉಳಿಸಿಕೊಳ್ಳುವ ಮನಸ್ಥಿತಿ ಇಲ್ಲವಾಗಿದೆ. ಮುಂದುವರೆದು ಇಂದಿನ ದಾಂಪತ್ಯ ಜೀವನ ಸಹ ಅನಿರೀಕ್ಷಿತವಾಗಿ ಬಿಟ್ಟಿದೆ. ಮದುವೆಯಾಗಿ ಕೆಲವೇ ತಿಂಗಳಲ್ಲಿ ಮುರಿದು ಬೀಳುತ್ತಿವೆ ಎಂದು ವಿಪರ್ಯಾಸ ವ್ಯಕ್ತಪಡಿಸಿದರು. 
    ಸಮಾಜದಲ್ಲಿನ ಇಂದಿನ ಬೆಳವಣಿಗೆಗಳಿಗೆ ಯಾರು ಕಾರಣ ಎಂಬುದನ್ನು ನಾವೆಲ್ಲರೂ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ನಮ್ಮ ಪೂರ್ವಿಕರು ನಮ್ಮನ್ನು ಬೆಳೆಸಿರುವ ದಾರಿಯಲ್ಲಿ ನಾವೆಲ್ಲರೂ ಸಾಗಿದಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಇಂದು ಸಮಾಜದಲ್ಲಿ ಹಿರಿಯರ ಆರೈಕೆ ನಿರ್ಲಕ್ಷಿಸಲಾಗುತ್ತಿದ್ದು, ಸಮಾಜದಲ್ಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೂ ನಾವೆಲ್ಲರೂ ಪೂರಕವಾಗಿ ಸ್ಪಂದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ ವೃದ್ದಾಶ್ರಮ ಮತ್ತು ಅನಾಥಾಶ್ರಮಗಳ ನೆರವಿಗೆ ಪ್ರತಿಯೊಬ್ಬರು ಮುಂದಾಗಬೇಕೆಂದರು. 
    ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ನಗರಸಭೆ ಸದಸ್ಯರಾದ ಸರ್ವಮಂಗಳ ಭೈರಪ್ಪ, ಕೆ. ಸುದೀಪ್ ಕುಮಾರ್, ಬಿ.ಎಂ ರವಿಕುಮಾರ್, ಕೆಡಿಪಿ ಸದಸ್ಯ ಎಚ್. ರವಿಕುಮಾರ್, ಸೂಡಾ ಸದಸ್ಯ ಫ್ರಾನ್ಸಿಸ್, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಹನುಮಮ್ಮ, ಮುಖಂಡರಾದ ಪೊಲೀಸ್ ಉಮೇಶ್, ಪ್ರಭಾಕರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಸುರಕ್ಷಾ ಜೀವನ ಸೇವಾ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಖಜಾಂಚಿ ಸೋಮಶೇಖರ್, ಪ್ರಮುಖರಾದ ಶಾರದ ಕುಮಾರಿ, ಶಕುಂತಲಾ ಪ್ರದೀಪ್, ಜಾಹ್ನವಿ ರೆಡ್ಡಿ, ಮಹಿಳಾ ಸೇವಾಕರ್ತರು ಹಾಗು ವೃದ್ದರು, ಅನಾಥರು ಸೇರಿದಂತೆ ಇತರರು ಪಾಲ್ಗೊಂಡಿದ್ದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಕಲಾವಿದ ಅಪೇಕ್ಷಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.