ಮಹಿಳೆಯರು ತಮ್ಮ ರಕ್ಷಣೆಯೊಂದಿಗೆ ಪ್ರಗತಿ, ಸುರಕ್ಷತೆ ಮತ್ತು ಹಕ್ಕುಗಳಿಗಾಗಿ ಒಟ್ಟಾಗಿ ಕೆಲಸ ಮಾಡಿ : ಅನನ್ಯ ಶಾಸ್ತ್ರಿ
ಭದ್ರಾವತಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ನೂತನವಾಗಿ ನ್ಯಾಯಧೀಶರಾಗಿ ಆಯ್ಕೆಯಾಗಿರುವ ಅನನ್ಯ ಶಾಸ್ತ್ರಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ: ಪ್ರಸ್ತುತ ಮಹಿಳೆ ಇಂದು ತನ್ನನ್ನು ರಕ್ಷಿಸಿಕೊಳ್ಳುವ ಜೊತೆಗೆ ಸಮಾನತೆಯೊಂದಿಗೆ ಪ್ರಗತಿ ಸಾಧಿಸಬೇಕಾಗಿದೆ ಎಂದು ನೂತನವಾಗಿ ನ್ಯಾಯಧೀಶರಾಗಿ ಆಯ್ಕೆಯಾಗಿರುವ ಅನನ್ಯ ಶಾಸ್ತ್ರಿ ಹೇಳಿದರು.
ಅವರು ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಲಿಂಗ ಸಮಾನತೆಗಾಗಿ ಉದಾರತೆ, ಸಹಯೋಗ ಮತ್ತು ಜ್ಞಾನ ಹಂಚಿಕೆಗೆ ಒತ್ತು ನೀಡುತ್ತದೆ. ಮಹಿಳೆಯರ ಪ್ರಗತಿ, ಸುರಕ್ಷತೆ ಮತ್ತು ಹಕ್ಕುಗಳಿಗಾಗಿ ಒಟ್ಟಾಗಿ ಕೆಲಸ ಮಾಡುವ ಸಂದೇಶ ಸಾರುತ್ತದೆ. ಇದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರು ತಮ್ಮ ಕುಟುಂಬಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ, ಸ್ಥಾನಮಾನಗಳನ್ನು ನೀಡಿ ಜವಾಬ್ದಾರಿಯುತವಾಗಿ ಮುನ್ನಡೆಯಬೇಕಾಗಿದೆ ಎಂದರು.
ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಸ್ಥಾಪಕಿ, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಮಹಿಳಾ ದಿನಾಚರಣೆ ಹಾಗು ಪ್ರಶಸ್ತಿ ಕುರಿತು ಮಾತನಾಡಿದರು. ಈ ಬಾರಿ ಶಿಕಾರಿಪುರದ ಅಂತರಾಷ್ಟ್ರೀಯ ಪಂಜ ಕುಸ್ತಿಪಟು ಗೌರಮ್ಮ ಅವರಿಗೆ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ದಂತ ವೈದ್ಯೆ ಡಾ. ಮಯೂರಿ, ಆಕಾಶವಾಣಿ ಉದ್ಘೋಷಕಿ ವಿದ್ಯಾ ಕಾರಂತ್, ಸರ್ವಜನಿಕ ಸರ್ಕಾರಿ ಆಸ್ಪತ್ರೆ ಶುಶ್ರೂಷಕಿ ಇಂದಿರಮ್ಮ, ವಾಹನ ಚಾಲಕಿ ಮಂಜುಳ ಶಿವಪ್ಪ, ಮಹಿಳಾ ಪೌರಕಾರ್ಮಿಕರಾದ ರುದ್ರಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಅಧ್ಯಕ್ಷೆ ನಾಗರತ್ನ ವಾಗೀಶ್‌ಕೋಠಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗೌರವಾಧ್ಯಕ್ಷೆ ಆರ್.ಎಸ್ ಶೋಭಾ, ಉಪಾಧ್ಯಕ್ಷೆ ವಿಜಯಜಗನ್ನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಸುಮ ತೀರ್ಥಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.