ತನ್ನದೇ ಆದ ಸಮಾಜ ರೂಪಿಸಿಕೊಳ್ಳುವ ದಾರಿಯಲ್ಲಿ ಮಹಿಳೆ ಯಶಸ್ವಿ ಪಯಣ : ಬಿ.ಕೆ ಮೋಹನ್
ಭದ್ರಾವತಿ ನಗರಸಭೆ ವತಿಯಿಂದ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾನೆ ಉಪನಿರ್ದೇಶಕಿ ಸಾವಿತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ: ಮಹಿಳೆಯರು ಇಂದು ಸಮಾಜದ ಬಹುತೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಪುರುಷರನ್ನು ಮೀರಿಸುವ ಮೂಲಕ ತನ್ನದೇ ಆದ ಸಮಾಜ ರೂಪಿಸಿಕೊಳ್ಳುವ ದಾರಿಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾಳೆ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
ಅವರು ಮಂಗಳವಾರ ನಗರಸಭೆ ವತಿಯಿಂದ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಮಹಿಳೆಯರು ಸಮಾಜದಲ್ಲಿ ಇನ್ನೂ ಹೆಚ್ಚು ಸಂಘಟಿತಗೊಳ್ಳುವ ಅಗತ್ಯವಿದೆ. ಮಹಿಳೆಯರು ಸಂಘಟಿತರಾಗಿ ಉತ್ತಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಜಿಲ್ಲಾ ಖಜಾನೆ ಉಪನಿರ್ದೇಶಕಿ ಸಾವಿತ್ರಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಯಾವುದೇ ರೀತಿ ಇರಲಿ. ನಾವು ನಮ್ಮ ಗುರಿ ತಲುಪುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಸರ್ಕಾರ ಮಹಿಳೆಗಾಗಿ ರೂಪಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರನ್ನು ಒಪ್ಪಿಕೊಳ್ಳುವ, ವಿರೋಧಿಸುವವರು ಇರುತ್ತಾರೆ. ಆದರೆ ನಾವುಗಳು ಇವುಗಳಿಗೆ ಕಿವಿಕೊಡಬಾರದು ಎಂದರು.
ಸಾವಿತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್ ಅಧ್ಯಕ್ಷತೆವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಪೌರಾಯುಕ್ತ ಕೆ.ಎನ್ ಹೇಮಂತ್, ನಗರಸಭೆ ಬಹುತೇಕ ಮಹಿಳಾ ಸದಸ್ಯರು ಹಾಗು ನಗರಸಭೆ ನಾಮನಿರ್ದೇಶಿತ ಮತ್ತು ನಗರ ಆಶ್ರಯ ಸಮಿತಿ ಸದಸ್ಯರು, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಗರಸಭೆ ಮಹಿಳಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಮಹಿಳಾ ಪೌರಕಾರ್ಮಿಕರು, ಸ್ವ-ಸಹಾಯ ಸಂಘ ಹಾಗು ಮಹಿಳಾ ಒಕ್ಕೂಟಗಳ ಪ್ರಮುಖರು, ಸದಸ್ಯರು ಪಾಲ್ಗೊಂಡಿದ್ದರು. ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.