ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಶ್ರೀ ವಾದಿರಾಜರ ಆರಾಧನೆ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಶುಕ್ರವಾರ ವಾದಿರಾಜರ ಆರಾಧನೆ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ: ಪ್ರತಿ ವರ್ಷದಂತೆ ಈ ಬಾರಿ ಸಹ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಶುಕ್ರವಾರ ವಾದಿರಾಜರ ಆರಾಧನೆ ವಿಜೃಂಭಣೆಯಿಂದ ಜರುಗಿತು. 
    ಬೆಳಿಗ್ಗೆ ನಿರ್ಮಾಲ್ಯ ಹಾಗೂ ಅಭಿಷೇಕ ನಡೆಯಿತು. ನಂತರ ಅಲಂಕೃತಗೊಂಡ ರಥದಲ್ಲಿ ಶ್ರೀ ವಾದಿರಾಜರ, ಶ್ರೀ ಗುರುರಾಜರ ಮತ್ತು ಶ್ರೀ ಜಯತೀರ್ಥರ ಬೃಂದಾವನದೊಂದಿಗೆ ಹಾಗು ಶ್ರೀ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಮತ್ತು ನಗರದ ವಿವಿಧ ಭಜನಾ ಮಂಡಳಿಗಳೊಂದಿಗೆ ಇತಿಹಾಸ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದವರೆಗೆ ಉತ್ಸವ ಮೆರವಣಿಗೆ ನಡೆಸಲಾಯಿತು. 
    ಶ್ರೀನಿವಾಸ್ ಆಚಾರ್ ಅವರಿಂದ ಶ್ರೀ ವಾದಿರಾಜರ ಕುರಿತು ಉಪನ್ಯಾಸ ನಡೆಯಿತು. ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನೆರವೇರಿತು. ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಆಚಾರ್ ಹಾಗೂ ಶ್ರೀನಿವಾಸ್ ಆಚಾರ್ ಧಾರ್ಮಿಕ ಆಚರಣೆಗಳ ನೇತೃತ್ವವಹಿಸಿದ್ದರು. 
    ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರುಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್ ಹಾಗೂ ನಿರಂಜನಾಚಾರ್ಯ, ಶುಭ ಗುರುರಾಜ ಮಾಧುರಾವ್, ಜಯತೀರ್ಥ, ಪವನ್‌ಕುಮಾರ್ ಉಡುಪ ಹಾಗೂ ಟಿ.ವಿ ಪ್ರಮೋದ್ ಮತ್ತು ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.