ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಪಿಯುಸಿ ತರಗತಿ ಆರಂಭಿಸಿ

ಸಚಿವ ಮಧುಬಂಗಾರಪ್ಪನವರಿಗೆ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಮನವಿ

ಭದ್ರಾವತಿ ಹೊಸಸಿದ್ದಾಪುರ ನೇತಾಜಿ ಎಸ್.ಸಿ.ಬಿ ಸರ್ಕಾರಿ ಪ್ರೌಢಶಾಲೆ. 
    ಭದ್ರಾವತಿ: ವಿಧಾನಸಭಾ ಕ್ಷೇತ್ರ ನಗರಸಭೆ ವ್ಯಾಪ್ತಿಯ ಹೊಸ ಸಿದ್ದಾಪುರ ನೇತಾಜಿ ಎಸ್.ಸಿ.ಬಿ ಸರ್ಕಾರಿ ಪ್ರೌಢಶಾಲೆ ಶಾಲೆಯನ್ನು ಮೇಲ್ದರ್ಜೆಗೇರಿಸಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪಿ.ಯು.ಸಿ ತರಗತಿಗಳನ್ನು ಆರಂಭಿಸುವಂತೆ ನಗರದ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. 
    ಪ್ರಸ್ತುತ ಈ ಶಾಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶದ ಸುಮಾರು ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅನುಭವಿ ಶಿಕ್ಷಕ ವರ್ಗದವರನ್ನು ಒಳಗೊಂಡಿದೆ. ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು,  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಶಾಲೆಗೆ ಪ್ರತಿ ವರ್ಷ ಶೇ.೯೦ರಷ್ಟು ಫಲಿತಾಂಶ ಲಭಿಸುತ್ತಿದೆ.  ಶಾಲೆಯು ಸುಸಜ್ಜಿತವಾದ ಗ್ರಂಥಾಲಯ, ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ಕೀಡಾಂಗಣವಿದ್ದು, ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳ ಜೊತೆಗೆ ಸಾಂಸ್ಕೃತಿಕ ಚಟುಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇತ ವಿದ್ಯಾರ್ಥಿಗಳು ಬಡ ವರ್ಗದವರಾಗಿದ್ದು, ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿಯಲ್ಲಿ ಈ ಶಾಲೆಯ ಶಿಕ್ಷಕ ವರ್ಗದವರನ್ನೇ ಬಳಸಿ ಕೊಂಡು ಇಲ್ಲಿಯೇ  ಪಿ.ಯು.ಸಿ. ತರಗತಿಗಳನ್ನು ಆರಂಭಿಸುವುದು. ಮೊದಲ ಹಂತದಲ್ಲಿ ಕಲಾ ವಿಭಾಗ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಟ್ರಸ್ಟ್ ಛೇರ್ಮನ್ ಹಾಗು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕೋರಿದ್ದಾರೆ. 
    ಮನವಿಗೆ ಸ್ಪಂದಿಸಿರುವ ಸಚಿವರು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ನಿರ್ದೇಶಿಸಿದ್ದು, ಈ ಕುರಿತು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಕೆ.ಸಿ ಶ್ರೀಪತಿ ಆರ್. ವೇಣುಗೋಪಾಲ್ ಅವರಿಗೆ ತಿಳಿಸಿದ್ದಾರೆ.