ಮತದಾರರ ಪಟ್ಟಿಯ (ಎಸ್‌ಐಆರ್) ವಿಶೇಷ ಸಮಗ್ರ ಪರಿಷ್ಕರಣೆ
ಭದ್ರಾವತಿ ತಾಲೂಕು ಕಚೇರಿಯಲ್ಲಿ ಸಭಾಂಗಣದಲ್ಲಿ ವಿಧಾನಸಭಾ ಕ್ಷೇತ್ರ-೧೧೨ ಮತದಾರರು ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಕುರಿತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿರುವ ತಹಸೀಲ್ದಾರ್ ಪರುಸಪ್ಪ ಕುರುಬರ ಸಭೆ ನಡೆಸಿ ಮಾಹಿತಿ ನೀಡಿದರು.
ಭದ್ರಾವತಿ: ವಿಧಾನಸಭಾ ಕ್ಷೇತ್ರ-೧೧೨ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಕಾರ್ಯ ಏಪ್ರಿಲ್-೨೦೨೬ರಿಂದ ಆರಂಭಗೊಳ್ಳಲಿದೆ. ಮತದಾರರು ೨೦೦೨ ಮತ್ತು ೨೦೨೫ ರ ಮತದಾರರ ಪಟ್ಟಿಯ ಮ್ಯಾಪಿಂಗ್ ಮತ್ತು ಪ್ರೋಜಿನಿ ಮಾಡಿಸಿಕೊಳ್ಳಬೇಕಾಗಿದೆ ಎಂದು ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿರುವ ತಹಸೀಲ್ದಾರ್ ಪರುಸಪ್ಪ ಕುರುಬರ ತಿಳಿಸಿದರು.
ಅವರು ತಮ್ಮ ಕಛೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ ಮಾಹಿತಿ ನೀಡಿದರು. ಈ ವಿಶೇಷ ಪರಿಷ್ಕರಣೆಯು ೨೦೦೨ ಮತದಾರ ಪಟ್ಟಿಯಲ್ಲಿರುವ ಮತದಾರರನ್ನು ೨೦೨೫ರ ಮತದಾರರ ಪಟ್ಟಿಯಲ್ಲಿರುವಂತೆ ಗುರುತಿಸಿಕೊಳ್ಳಲು ಮ್ಯಾಪಿಂಗ್ ಮತ್ತು ಪ್ರೋಜಿನಿ ಕಾರ್ಯ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮತದಾರರು ತಾವು ಮತದಾನ ಮಾಡುವ ಕೇಂದ್ರದಲ್ಲಿ ಬಿಎಲ್‌ಓ ಅವರನ್ನು ಸಂಪರ್ಕಿಸಿ ೨೦೦೨ರಲ್ಲಿ ಮತದಾನ ಮಾಡಿದವರು ೨೦೨೫ ಮತಪಟ್ಟಿಯಲ್ಲಿ ಹೆಸರುಗಳು ಇರುವಂತೆ ನೋಡಿಕೊಳ್ಳಬೇಕು. ಅದರಲ್ಲಿ ಸಂತತಿ ಸೇರ್ಪಡೆ-೧೮ ವರ್ಷ ಮೇಲ್ಪಟ್ಟ ೪೦ ವರ್ಷದೊಳಗಿನ ಮತದಾರರನ್ನು ಮತಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳಲು ಅಥವಾ ಹೊಸದಾಗಿ ಹೆಸರು ಸೇರಿಸಲು ಕೇಳಿದ ದಾಖಲೆಗಳು ಸಲ್ಲಿಸಬೇಕು. ಅಕಸ್ಮಾತ್ ಹೆಸರುಗಳು ಇಲ್ಲದಿದ್ದಲ್ಲಿ ೨೦೦೨ ರಲ್ಲಿ ಮತದಾನ ಮಾಡಿದ ಗುರುತಿನ ಚೀಟಿ, ಮತಕ್ಷೇತ್ರ, ಮತದಾನ ಕೇಂದ್ರ, ಮತ ಕ್ರಮ ಸಂಖ್ಯೆಯನ್ನು ತಿಳಿಸಿ/ತೋರ್ಪಡಿಸಿ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮತದಾರರ ಪಟ್ಟಿಯಿಂದ ಬಿಟ್ಟು ಹೋಗುವ ಸಂಭವ ಇರುತ್ತದೆ. ಆದ್ದರಿಂದ ಎಲ್ಲಾ ಮತದಾರರು ಈ ಅಮೂಲ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನೈಜ ಮತದಾರರೆಂದು ಬಿಂಬಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್, ಜೆಡಿಎಸ್ ವಕ್ತಾರ ಎನ್. ರಾಮಕೃಷ್ಣ, ಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಆನಂದ್, ನಗರಸಭೆ ಸದಸ್ಯ ಬಸವರಾಜ ಬಿ. ಆನೇಕೊಪ್ಪ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.