ಸಮಾಜ ಸೇವಕ, ಕನ್ನಡ ಅಭಿಮಾನಿ ಮುನೀರ್ ಅಹಮದ್ ಕುಂಸಿ ನಿಧನ

ಮುನೀರ್ ಅಹಮದ್ ಕುಂಸಿ 
    ಭದ್ರಾವತಿ : ನಗರದ ಅನ್ವರ್ ಕಾಲೋನಿ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ, ಸಮಾಜ ಸೇವಕರು, ಅಪ್ಪಟ ಕನ್ನಡ ಅಭಿಮಾನಿ ಮುನೀರ್ ಅಹಮದ್ ಕುಂಸಿ(೭೪) ಗುರುವಾರ ನಿಧನ ಹೊಂದಿದರು. 
    ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಕುಂಸಿಯಲ್ಲಿ ನಡೆಯಲಿದ್ದು, ನಗರದ ಅನ್ವರ್ ಕಾಲೋನಿಯಲ್ಲಿ ವಾಸವಿದ್ದ ಮುನೀರ್ ಅವರು ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.  ಪ್ರಗತಿಪರ ಸಂಘಟನೆಗಳ ಒಕ್ಕೂಟದಲ್ಲಿ ಗುರುತಿಸಿಕೊಂಡು ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. 
    ಗಣ್ಯರಿಂದ ಸಂತಾಪ: 
    ಒಬ್ಬ ಅಪ್ಪಟ ಕನ್ನಡ ಅಭಿಮಾನಿಯಾಗಿ, ಕವಿಯಾಗಿ ಮತ್ತು ಸಾಹಿತಿಯಾಗಿ ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ  ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಭದ್ರಾವತಿ ಮತ್ತು ಶಿವಮೊಗ್ಗ ಭಾಗದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಲೋಕದ ಕೊಂಡಿಯಾಗಿದ್ದರು. ನಗರದಲ್ಲಿ ಉಸ್ಮಾನಿಯಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿಯಾಗಿ ನೂರಾರು ಜನೋಪಕಾರಿ ಕೆಲಸಗಳಿಗೆ ಅವರು ಭದ್ರಾ ಬುನಾದಿ ಹಾಕಿಕೊಟ್ಟಿದ್ದರು. ಇವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಮತ್ತು ಸಮಾಜಸೇವೆಯ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜೆಬಿಟಿ ಬಾಬು, ಅಬ್ದುಲ್ ಖದೀರ್, ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮಾಜಿ ಉಪಮೇಯರ್ ಮಹಮದ್ ಸನಾವುಲ್ಲಾ, ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ ಅಯೂಬ್ ಖಾನ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ. ಎಂ. ಚಂದ್ರಶೇಖರಯ್ಯ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.