ಸದಾ ಕಾಲ ವೃತ್ತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಿಂದ ಹೆಚ್ಚಿನ ಸಹಕಾರಿ : ಬಿ.ಕೆ ಮೋಹನ್

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಘಟಕದಿಂದ ಹಳೇನಗರ ಭೂತನಗುಡಿ ಡೇಕೇರ್-ಸರ್ಜಿಕಲ್ ಕೇರ್ & ಡಯಾಗ್ನೋಸ್ಟಿಕ್ಸ್ ಸಹಯೋಗದೊಂದಿಗೆ ಪತ್ರಕರ್ತರು ಮತ್ತು ಅವರ ಕುಟುಂಬ ವರ್ಗದವರಿಗೆ ಭಾನುವಾರ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಅನಉದ್ಘಾಟಿಸಿ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಸದಾ ಕಾಲ ವೃತ್ತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಆರೋಗ್ಯ ಕಾಳಜಿ ಬಹಳ ಮುಖ್ಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ಆರೋಗ್ಯ ತಪಾಸಣೆ ಶಿಬಿರಗಳು ಹೆಚ್ಚಿನ ಸಹಕಾರಿಯಾಗಲಿವೆ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು. 
    ಅವರು ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಘಟಕದಿಂದ ಹಳೇನಗರ ಭೂತನಗುಡಿ ಡೇಕೇರ್-ಸರ್ಜಿಕಲ್ ಕೇರ್ & ಡಯಾಗ್ನೋಸ್ಟಿಕ್ಸ್ ಸಹಯೋಗದೊಂದಿಗೆ ಪತ್ರಕರ್ತರು ಮತ್ತು ಅವರ ಕುಟುಂಬ ವರ್ಗದವರಿಗೆ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. 
    ಸಮಾಜದಲ್ಲಿ ಬಹುಮುಖ್ಯ ಪಾತ್ರವಹಿಸಿರುವ ಪತ್ರಕರ್ತರು ಸದಾ ಕಾಲ ಆರೋಗ್ಯವಂತರಾಗಿರಬೇಕು. ವಿಭಿನ್ನ ಕಾರ್ಯ ಚಟುವಟಿಕೆಗಳ ಮೂಲಕ ನಗರದಲ್ಲಿರುವ ಪತ್ರಕರ್ತರ ಸಂಘ ಇತರರಿಗೆ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. 
ಬಡ ವರ್ಗದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಪತ್ರಕರ್ತರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಅಲ್ಲದೆ ಇದರ ಜೊತೆಗೆ ರಕ್ತದಾನ ಶಿಬಿರಗಳನ್ನು ಸಹ ಆಯೋಜಿಸಬೇಕು. ಪತ್ರಕರ್ತರ ಕಾರ್ಯ ಚಟುವಟಿಕೆಗಳಿಗೆ ಶಾಸಕರು ಹಾಗು ಅವರ ಕುಟುಂಬ ವರ್ಗದವರು ಎಲ್ಲಾ ರೀತಿಯ ಸಹಕಾರ ನೀಡಲು ಬದ್ದರಾಗಿದ್ದೇವೆ ಎಂದರು. 
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕೆ.ವಿ ಶಿವಕುಮಾರ್ ಮಾತನಾಡಿ, ಪತ್ರಕರ್ತರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಅವರ ಸಂಕಷ್ಟದ ಸಮಯದಲ್ಲಿ ನೆರವಾಗಲು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಸ್ಥಳೀಯ ನಗರಸಭೆ ಆಡಳಿತ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಆ ಮೂಲಕ ಪತ್ರಕರ್ತರ ಮಕ್ಕಳ ಶಿಕ್ಷಣಕ್ಕೆ ಹಾಗು ತುರ್ತು ಸಂದರ್ಭಗಳಲ್ಲಿ ನೆರವಾಗಲಿದೆ. ಸಮಾಜದಲ್ಲಿ ಪತ್ರಕರ್ತರು ಮತ್ತು ವೈದ್ಯರ ನಡುವಿನ ಬಾಂಧವ್ಯ ಸದಾ ಕಾಲ ಉತ್ತಮವಾಗಿರಬೇಕೆಂದರು. 
    ಈ ನಡುವೆ ಬಿ.ಕೆ ಮೋಹನ್‌ರವರು ಸ್ಥಳೀದಲ್ಲಿಯೇ ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಲು ಮುಂದಾಗುವಂತೆ ಮನವಿ ಮಾಡಿದರು. 
    ಎಸ್‌ಎಲ್‌ಎನ್ ಸಂಸ್ಥೆಯ ವೈದ್ಯಕೀಯ ನಿರ್ದೇಶಕ, ಹೃದಯ ರೋಗ ತಜ್ಞ ಡಾ. ಸುಶೀತ್ ಎಸ್. ಶೆಟ್ಟಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೃದಯ ರೋಗಗಳು ಹೆಚ್ಚಾಗುತ್ತಿವೆ. ಹೃದಯ ಸಂಬಂಧಿ ರೋಗಗಳಿಗೆ ಹೆಚ್ಚಿನ ಹಣ ವ್ಯಯವಾಗಲಿದೆ. ಸಂಸ್ಥೆ ವತಿಯಿಂದ ಪತ್ರಕರ್ತರಿಗೆ ನೆರವಾಗಬೇಕೆಂಬ ಆಶಯದೊಂದಿಗೆ ಉಚಿತ ತಪಾಸಣೆ ನಡೆಸಲಾಗಿದೆ. ಮುಂದಿನ ದಿನಗಳಲ್ಲೂ ಇನ್ನೂ ಹೆಚ್ಚಿನ ಸಹಕಾರ ನೀಡಲು ಸಂಸ್ಥೆ ಬದ್ಧವಿದೆ ಎಂದರು. 
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಂಗಾನಾಯ್ಕ ಗೊಂದಿ ಅಧ್ಯಕ್ಷತೆವಹಿಸಿದ್ದರು. ಕಿಡ್ನಿ ರೋಗ ತಜ್ಞ ಡಾ. ಇಮ್ರಾನ್,  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಚ್.ಯು ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ಆರ್.ಎಸ್ ಹಾಲಸ್ವಾಮಿ, ನಗರಸಭೆ ಸದಸ್ಯ ಬಸವರಾಜ ಬಿ. ಆನೇಕೊಪ್ಪ ಮತ್ತು ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಸ್ವಾಗತಿಸಿ, ರಾಬರ್ಟ್ ಪ್ರಾರ್ಥಿಸಿ, ಉಪಾಧ್ಯಕ್ಷ ಸುಭಾಷ್‌ರಾವ್ ಸಿಂಧ್ಯಾ ನಿರೂಪಿಸಿದರು. ಪದಾಧಿಕಾರಿಗಳಾದ ಖಜಾಂಚಿ ಫಿಲೋಮಿನಾ .ಆರ್, ಕಾರ್ಯದರ್ಶಿ ಅನಂತಕುಮಾರ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಎಲ್ಲಾ ಸದಸ್ಯರು ಹಾಗು ಅವರ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.