ಮಹಿಳೆ ಅಬಲೆ ಅಲ್ಲ, ಸಬಲೆ : ಸಾಧನೆ ದಾರಿಯಲ್ಲಿ ಪಯಣ

`ಕ್ಷಮೆಯಾಧರಿತ್ರಿ' ನಾಟಕ ಪ್ರದರ್ಶನದಲ್ಲಿ ಪ್ರಸೂತಿ ತಜ್ಞೆ ಡಾ. ವರ್ಷ 

ಭದ್ರಾವತಿ ಜನ್ನಾಪುರ, ಅಪರಂಜಿ ಅಭಿನಯ ಶಾಲೆ ಹಾಗು ಕಡದಕಟ್ಟೆ ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಮಹಿಳಾ ಘಟದಕ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಲೋಯರ್ ಹುತ್ತಾಕಾಲೋನಿ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ  ಅಪರಂಜಿ ಶಿವರಾಜ್ ರಚನೆ ಹಾಗು ಸಿ.ಎಚ್ ಪುಷ್ಪಲತಾ ವಿನ್ಯಾಸ ಮತ್ತು ನಿರ್ದೇಶನದ `ಕ್ಷಮೆಯಾಧರಿತ್ರಿ' ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. 
    ಭದ್ರಾವತಿ: ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ.  ಆಕೆ ಅಬಲೆ ಅಲ್ಲ, ಸಬಲೆಯಾಗಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುವ ವಿಶ್ವಾಸವಿದೆ ಎಂದು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ವರ್ಷ ಹೇಳಿದರು. 
    ಅವರು ಜನ್ನಾಪುರ, ಅಪರಂಜಿ ಅಭಿನಯ ಶಾಲೆ ಹಾಗು ಕಡದಕಟ್ಟೆ ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಮಹಿಳಾ ಘಟದಕ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಲೋಯರ್ ಹುತ್ತಾಕಾಲೋನಿ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಅಪರಂಜಿ ಶಿವರಾಜ್ ರಚನೆ ಹಾಗು ಸಿ.ಎಚ್ ಪುಷ್ಪಲತಾ ವಿನ್ಯಾಸ ಮತ್ತು ನಿರ್ದೇಶನದ `ಕ್ಷಮೆಯಾಧರಿತ್ರಿ' ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 


    ಸಮಾಜದಲ್ಲಿ ಮಹಿಳೆಯರು ಹಂತ ಹಂತವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ಇದು ನಾವೆಲ್ಲರೂ ಹೆಮ್ಮೆಪಡುವ ವಿಚಾರವಾಗಿದೆ. `ಕ್ಷಮೆಯಾಧರಿತ್ರಿ' ನಾಟಕ ಮಹಿಳೆಯರ ಜೀವನ ಕ್ರಮ ಹಾಗು ಅವರಲ್ಲಿ ಬದಲಾವಣೆ ಬಗ್ಗೆ ಅರಿವು ಮೂಡಿಸುತ್ತಿದೆ. ಕಲಾವಿದರ ಅಭಿನಯ ಪ್ರೇಕ್ಷಕರ ಮನ ಗೆದ್ದಿದ್ದು, ಇಂತಹ ನಾಟಕ ಪ್ರದರ್ಶನ ಹೆಚ್ಚಾಗಿ ನಡೆಯಬೇಕೆಂದರು. 
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರಮಾವೆಂಕಟೇಶ್ ಮಾತನಾಡಿ, ನಾಟಕದಲ್ಲಿ ಮಹಿಳಾ ಕಲಾವಿದರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಇದಕ್ಕೆ ಕಾರಣಕರ್ತರಾದ ಅಪರಂಜಿ ಅಭಿನಯ ಶಾಲೆಯ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು. 
    ರಂಗಕರ್ಮಿ, ಕಿರುತೆರೆ ನಟ ಅಪರಂಜಿ ಶಿವರಾಜ್ ಆಶಯ ನುಡಿಗಳನ್ನಾಡಿದರು. ಪ್ರೇಮ ಸ್ವಾಗತಿಸಿ, ಗೀತಾ ವಾರ್ಷಿಕ ವರದಿ ಮಂಡಿಸಿದರು. ಭಾಗ್ಯಲಕ್ಷ್ಮಿ ಕಾರ್ಯಕ್ರಮ ನಿರೂಪಸಿದರು. ಜನ್ನಾಪುರ, ಅಪ್ಪರ್ ಹುತ್ತಾ, ಲೋಯರ್ ಹುತ್ತಾ, ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ಹಾಗು ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ನಾಟಕ ಪ್ರದರ್ಶನ ವೀಕ್ಷಿಸಿದರು.