ಇಂದಿರಾ ಕ್ಯಾಂಟೀನ್‌ನಲ್ಲಿ ಸಿಲಿಂಡರ್ ಬಳಕೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಸಮಸ್ಯೆ
ಕಲ್ಯಾಣಮಂಟಪ ಸೇರಿದಂತೆ ಇನ್ನಿತರೆಡೆ ಆಯೋಜಕರೇ ಸಿಲಿಂಡರ್ ಪೂರೈಸಿಕೊಳ್ಳಬೇಕು
ಭದ್ರಾವತಿ: ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ದಿನ ಆಹಾರ ತಯಾರಿಸುವ ಇಂದಿರಾ ಕ್ಯಾಂಟೀನ್‌ನಲ್ಲಿ ಸಿಲಿಂಡರ್ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಉಳಿದಂತೆ ಕಲ್ಯಾಣ ಮಂಟಪ ಸೇರಿದಂತೆ ಇನ್ನಿತರೆ ಸಿಲಿಂಡರ್ ಬಳಕೆ ಕಾರ್ಯಕ್ರಮ ಆಯೋಜಕರೇ ಮಾಡಿಕೊಳ್ಳಬೇಕಾಗಿದೆ. ಅಂಗನವಾಡಿಗಳಿಗೆ ಈಗಾಗಲೇ ಸಿಲಿಂಡರ್ ಪೂರೈಸಲಾಗಿದ್ದು, ಖಾಲಿಯಾಗಲು ಕೆಲವು ದಿನಗಳು ಬೇಕಾಗಿವೆ. ಈ ಹಿನ್ನಲೆಯಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಕಂಡು ಬರುತ್ತಿಲ್ಲ.
ನ್ಯೂಟೌನ್ ಬಂಟರ ಭವನದ ಸುಬ್ಬಣ್ಣ ರೈ ಮಾತನಾಡಿ, ನಾವು ಅಡುಗೆ ತಯಾರಿಕೆಗೆ ಅಗತ್ಯವಿರುವ ಪಾತ್ರೆ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಒದಗಿಸುತ್ತೇವೆ. ಸಿಲಿಂಡರ್ ವ್ಯವಸ್ಥೆ ಕಾರ್ಯಕ್ರಮ ಆಯೋಜಕರೇ ಮಾಡಿಕೊಳ್ಳಬೇಕು. ಅಡುಗೆ ಮಾಡಲು ಸಿಲಿಂಡರ್ ಬಳಕೆ ಬಿಟ್ಟು ಬೇರೆ ಯಾವುದೇ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಇದುವರೆಗೂ ಸಿಲಿಂಡರ್ ಸಮಸ್ಯೆ ಹಿನ್ನಲೆಯಲ್ಲಿ ನಿಗದಿಯಾಗಿರುವ ಯಾವುದೇ ಕಾರ್ಯಕ್ರಮಗಳು ಮುಂದೂಡಿಲ್ಲ ಎಂದರು.
ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್ ಮಾತನಾಡಿ, ನಗರದಲ್ಲಿ ಎರಡು ಕಡೆ ಇಂದಿರಾ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಒಂದು ಕಡೆ ಮಾತ್ರ ಅಡುಗೆ ಸಿದ್ದಪಡಿಸಲಾಗುತ್ತಿದೆ. ಸದ್ಯಕ್ಕೆ ಸಿಲಿಂಡರ್ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಬಹುದು ಎಂದರು.
ನ್ಯೂಟೌನ್ ಲಯನ್ಸ್ ಕ್ಲಬ್ ಸಮೀಪದ ದಯಾಸಾಗರ್ ಟ್ರಸ್ಟ್‌ನಲ್ಲಿ ನಿರ್ಗತಿಕರು, ವಯೋವೃದ್ಧರಿಗೆ ಪ್ರತಿದಿನ ಸುಮಾರು ೩೦ ಮಂದಿಗೆ ಆಹಾರ ಸಿದ್ದಪಡಿಸಲಾಗುತ್ತದೆ. ಆಹಾರ ತಯಾರಿಸಲು ಸಿಲಿಂಡರ್ ಮತ್ತು ಸೌದೆ ಬಳಸಲಾಗುತ್ತಿದೆ. ಸದ್ಯಕ್ಕೆ ಸಿಲಿಂಡರ್ ಪೂರೈಕೆಗೆ ಸಂಬಂಧಿಸಿದಂತೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಟ್ರಸ್ಟ್ ಅಧ್ಯಕ್ಷ ಆರ್. ಮೋಸಸ್ ತಿಳಿಸಿದ್ದಾರೆ.