ಭಾರತ ತನ್ನ ನಿಲುವು ಪ್ರಕಟಿಸಲಿ, `ಯುದ್ದ ಬೇಡ ಜಾಗತಿಕ ಶಾಂತಿ ಬೇಕು'

ಮಾ.೧೮ರಂದು ಸಂಜೆ ೫ ಗಂಟೆಗೆ ಸಾಂಕೇತಿಕ ಪ್ರತಿಭಟನೆ 


    ಭದ್ರಾವತಿ: ಅಮೇರಿಕ-ಇಸ್ರೇಲ್ ವಿರುದ್ಧ, ಇರಾನ್ ಜನತೆಯ ಪರವಾಗಿ 'ಯುದ್ಧ ಬೇಡ ಜಾಗತಿಕ ಶಾಂತಿ ಬೇಕು' ಎಂಬ ನಿಲುವು  ಭಾರತ ಪ್ರಕಟಿಸುವಂತೆ ಒತ್ತಾಯಿಸಿ ಮಾ.೧೮ರ ಬುಧವಾರ ಸಂಜೆ ೫ ಗಂಟೆಗೆ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆ ಮುಂಭಾಗ ಅಂಬೇಡ್ಕರ್ ವೈಚಾರಿಕ ವೇದಿಕೆ ಕರ್ನಾಟಕ ಸಂಘಟನೆಯಿಂದ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 
    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆ ಸಂಚಾಲಕರಾದ ಪಿ. ಮೂರ್ತಿ ಮತ್ತು ಜಯರಾಮ್‌ರವರು, ಅಮೇರಿಕ ಮತ್ತು ಇಸ್ರೇಲ್ ದೇಶಗಳು ಕಾರಣವಿಲ್ಲದೆ ಇರಾನ್ ಅದ್ಯಕ್ಷ ಆಯಾತುಲ್ಲಾ ಖಮೇನಿಯವರನ್ನು ಕೊಂದು ಹಾಕುವುದರ ಮೂಲಕ ಯುದ್ಧ ಘೋಷಿಸಿವೆ. ಯುದ್ಧ ಈಗಾಗಲೇ ೧೬ನೇ ದಿನಕ್ಕೆ ಕಾಲಿಟ್ಟಿದೆ. ಆ ದೇಶದ ಶಾಲಾ-ಕಾಲೇಜುಗಳ ಮೇಲೆ ಬಾಂಬುಗಳ ಸುರಿಮಳೆ ಗೈದಿದ್ದರಿಂದ ಸಾವಿರಾರು ಜನರ ಮರಣಹೋಮವಾಗಿದೆ. ಇರಾನ್ ತೈಲ ಉತ್ಪಾಧಕ ಘಟಕಗಳು, ಮಿಲಿಟರಿ ನೆಲೆಗಳು, ಮೂಲಭೂತ ಸೌಲಭ್ಯಗಳು ಬಾಂಬ್, ಕ್ಷಿಪಣಿ ಮತ್ತು ಡೋನ್‌ಗಳ ದಾಳಿಗಳಿಂದ ಅಪಾರ ಸಂಪತ್ತು ನಷ್ಟವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. 
     ಇರಾನ್ ದೇಶದ ಆಗಾದ ತೈಲ ಸಂಪತ್ತಿನ ಮೇಲೆ ಅಮೇರಿಕ ಮತ್ತು ಇಸ್ರೇಲ್ ದೇಶಗಳ ದೊಡ್ಡ ಕಾರ್ಪೋರೇಟ್ ಕಂಪನಿಗಳ ಹಿಡಿತ ಸಾಧಿಸಲು ಮಧ್ಯ ಪ್ರಾಚ್ಯದ ಕೆಲ ಮುಸ್ಲಿಂ ದೇಶಗಳ ಬೆಂಬಲದ ಮೂಲಕ ಈ ಯುದ್ಧ ಸಾರಲಾಗಿದೆ ಎಂದು ಆರೋಪಿಸಿದ್ದಾರೆ. 
    ಇರಾನ್ ತನ್ನ ದೇಶದ ಜನನಾಯಕನನ್ನು ಕಳೆದುಕೊಂಡಿದ್ದರೂ ಅಮೇರಿಕ ಮತ್ತು ಇಸ್ರೇಲ್ ಸೇರಿದಂತೆ ಅವುಗಳಿಗೆ ಬೆಂಬಲವಾಗಿ ನಿಂತಿರುವ ಕೊಲ್ಲಿ ರಾಷ್ಟ್ರಗಳ ಆಡಳಿತ ಕಚೇರಿ, ಮಿಲಿಟರಿ ನೆಲೆಗಳ ಮೇಲೆ ಯುದ್ಧವನ್ನು ತೀವುಗೊಳಿಸಿದೆ. ಈ ಯುದ್ಧವನ್ನು ಜಗತ್ತಿನ ಬಹಪಾಲು ದೇಶಗಳು ವಿರೋಧಿಸಿವೆ. ಅಲ್ಲದೆ ಅಮೇರಿಕ ಮತ್ತು ಇಸ್ರೇಲ್ ದೇಶಗಳಿಗೆ ಕೆಲವೇ ಕೆಲವು ದೇಶಗಳು ಮಾತ್ರ ಬೆಂಬಲ ನೀಡಿವೆ. ರಷ್ಯಾ, ಚೀನಾ, ದಕ್ಷಿಣ ಕೋರಿಯಾ ಇನ್ನಿತರ ದೇಶಗಳು ಇರಾನ್ ಪರ ಬಹಿರಂಗ ಬೆಂಬಲ ಘೋಷಿಸಿವೆ. ಇರಾನ್-ಭಾರತ ದೇಶಗಳ ನಡುವಿನ ಬಾಂಧವ್ಯದ ದೃಷ್ಟಿಯಿಂದಾದರೂ ಯುದ್ಧ ಆರಂಭದ ದಿನಗಳಲ್ಲೇ ಇರಾನ್ ಪರ ತನ್ನ ನಿಲುವು ಪ್ರಕಟಿಸಬೇಕಾಗಿತ್ತು. ಅಂತಹ ದೃಢತ್ವ ಈ ಸರ್ಕಾರಕ್ಕೆ ಇಲ್ಲವೆಂಬುದು ಮತ್ತೊಮ್ಮೆ ಸಾಬೀತಾಯಿತು ಎಂದು ಮೂದಲಿಸಿದ್ದಾರೆ. 
    ದೂರದ ದೇಶಗಳಲ್ಲಿ ಯುದ್ಧದ ಕಾರ್ಮೋಡದಿಂದಾಗಿ ಎಲ್‌ಪಿಜಿ ಗ್ಯಾಸ್ ದರ ಹೆಚ್ಚಾಯಿತು. ಪೂರೈಕೆ ಕೊರತೆ ಜನರನ್ನು ಬಾಧಿಸಿತು. ಅನಿಲ ಇಂಧನಗಳ ಬೆಲೆ ಏರಿಕೆ, ಕೊರತೆ ಕಾಡುತ್ತಿದೆ. ಜಾಗತಿಕ ವಿದ್ಯಾಮಾನದ ಯುದ್ಧ ನಮ್ಮ ಮನೆಯ ಕದವನ್ನು ತಟ್ಟುತ್ತಿದೆ. ಯುದ್ಧದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸಲು, ಯುದ್ಧ ಸಂತ್ರಸ್ತ ಜನರು, ದೇಶಗಳ ಪರವಾಗಿ ಸರ್ಕಾರ ನಿಲುವು ಪ್ರಕಟಿಸಬೇಕೆಂದು ಒತ್ತಾಯಿಸಲು ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.