೨೫ ಕೋ.ರು. ವೆಚ್ಚದಲ್ಲಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ : ಷಡಾಕ್ಷರಿ

ರಾಜ್ಯ ವಲಯ ಯೋಜನೆ-೮, ಜಿಲ್ಲಾ ವಲಯ ವಿಶೇಷ ಘಟಕ ಮತ್ತು ಗಿರಿಜನ ಪ್ರಯೋಜನ ಇಲಾಖಾ ವತಿಯಿಂದ ಮಂಗಳವಾರ ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ೩೩ ಅರ್ಹ ಬಡ ಮೀನುಗಾರರಿಗೆ ಇಲಾಖೆಯ ಕಿಟ್ ವಿತರಿಸಲಾಯಿತು. 
    ಭದ್ರಾವತಿ : ದೊಣಬಘಟ್ಟ ರಸ್ತೆಯ ನಗರಸಭೆ ವ್ಯಾಪ್ತಿಯ ಕವಲಗುಂದಿ ಗ್ರಾಮದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ಸುಮಾರು ೨೫ ಕೋ. ರು. ವೆಚ್ಚದಲ್ಲಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ರೂಪುರೇಷೆ ಸಿದ್ದಪಡಿಸಲಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಷಡಾಕ್ಷರಿ ತಿಳಿಸಿದರು. 
    ರಾಜ್ಯ ವಲಯ ಯೋಜನೆ-೮, ಜಿಲ್ಲಾ ವಲಯ ವಿಶೇಷ ಘಟಕ ಮತ್ತು ಗಿರಿಜನ ಪ್ರಯೋಜನ ಇಲಾಖಾ ವತಿಯಿಂದ ಮಂಗಳವಾರ ಶಾಸಕರ ಗೃಹ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ೩೩ ಅರ್ಹ ಬಡ ಮೀನುಗಾರರಿಗೆ ಇಲಾಖೆಯ ಕಿಟ್ ವಿತರಿಸಿ ಮಾತನಾಡಿದರು. 
    ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ನಿರಂತರ ಪ್ರಯತ್ನದ ಫಲವಾಗಿ ಸರ್ಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿ ಸಹ ಸುಮಾರು ೧೦ ಸಾವಿರ ರು. ಮೌಲ್ಯದ ಮೀನು ಬಲೆ, ತೆಪ್ಪ, ಹರಿಗೋಲು ಸೇರಿದಂತೆ ಇನ್ನಿತರ ಸಲಕರಣೆಗಳನ್ನು ಒಳಗೊಂಡ ಒಟ್ಟು ೩.೩೦ ಲಕ್ಷ ರು. ಮೌಲ್ಯದ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು. 
    ಈ ಹಿಂದೆ ಸರ್ಕಾರ ಬಜೆಟ್‌ನಲ್ಲಿ ನಗರದಲ್ಲಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಘೋಷಿಸಿತ್ತು. ಈ ಪ್ರಕ್ರಿಯೆಗೆ ಇದೀಗ ಚಾಲನೆ ತೊರೆದಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ಹೈದರಾಬಾದ್ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ನಿಗಮ ಮತ್ತು ರಾಜ್ಯ ಮೀನುಗಾರಿಕೆ ಇಲಾಖೆ ವತಿಯಿಂದ ರೂ ೨೫ ಕೋ. ರು. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ರೂಪುರೇಷೆ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಬಳಿಕ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ ಎಂದರು. 
    ಹೈಟೆಕ್ ಮೀನು ಮಾರುಕಟ್ಟೆಯಲ್ಲಿ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ಹಾಗು ಆರೋಗ್ಯಕರವಾದ ಮೀನು ಮಾರಾಟಕ್ಕೆ ಅವಕಾಶವಿದ್ದು, ಮೀನುಗಳು ಹಾಳಾಗದಂತೆ ಸಂಗ್ರಹಿಸಿಡಲು ಬೃಹತ್ ಐಸ್ ಪ್ಲಾಂಟ್ ಕೊಠಡಿಗಳನ್ನು ಮಾರುಕಟ್ಟೆ ಒಳಗೊಂಡಿದೆ ಎಂದರು.
    ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕ್ಷೇತ್ರದಲ್ಲಿರುವ ಬಡ ಮೀನುಗಾರರಿಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಅಲ್ಲದೆ ನಗರದಲ್ಲಿ ಮುಂದಿನ ದಿನಗಳಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣಗೊಳ್ಳಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಉಪ ನಿರ್ದೇಶಕ ಶಿವಕುಮಾರ್, ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳ ನಿರ್ದೇಶಕ ಕೆ ಮುರುಗನ್ ಹಾಗು ತಾಲೂಕು ಭದ್ರಾ ಮೀನುಗಾರರ ಸಹಕಾರ ಸಂಘದ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.