ದಿವಂಗತ ಲಕ್ಷ್ಮೀಪತಿಯವರು ಯುವ ಕಲಾವಿದರಿಗೆ ಮಾರ್ಗದರ್ಶಕರು
ಭದ್ರಾವತಿ ನಗರದ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಭಾನುವಾರ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ, ಹಿರಿಯ ರಂಗ ಕಲಾವಿದ ದಿವಂಗತ ಲಕ್ಷ್ಮೀಪತಿಯವರ ಶ್ರದ್ದಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ, ಹಿರಿಯ ರಂಗ ಕಲಾವಿದ ದಿವಂಗತ ಲಕ್ಷ್ಮೀಪತಿಯವರು ಇಂದಿನ ಯುವ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು. ರಂಗಭೂಮಿ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯವಾಗಿದೆ ಎಂದು ನಗರದ ರಂಗಭೂಮಿ ಕಲಾವಿದರು ಬಣ್ಣಿಸಿದರು.
ನಗರದ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ದಿವಂಗತ ಲಕ್ಷ್ಮೀಪತಿಯವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಗರದಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿ ಅವರು ಸಮಾಜದ ಮುಂಚೂಣಿಯಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದರು. ಇವರ ನಿಧನದಿಂದ ರಂಗಭೂಮಿ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ಸೂಚಿಸಿದರು.
ಜಾನಪದ ಕಲಾವಿದರಾದ ತಮಟೆ ಜಗದೀಶ್, ಜಿ. ದಿವಾಕರ್, ರಂಗಭೂಮಿ ಹಾಗು ಕಿರುತೆರೆ ನಟ ಅಪರಂಜಿ ಶಿವರಾಜ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ. ಎಂ. ಚಂದ್ರಶೇಖರಯ್ಯ, ಹಿರಿಯ ರಂಗಭೂಮಿ ಕಲಾವಿದರಾದ ಕಪನೀಗೌಡ, ಕೆ.ಎಸ್ ರವಿಕುಮಾರ್, ಬಿ. ಕಮಲಾಕರ್, ಫ್ರಾನ್ಸಿಸ್, ಡಿ.ಆರ್ ಹರೀಶ್, ಬಿ. ಚಿದಾನಂದ, ಕೋಡ್ಲು ಯಜ್ಞಯ್ಯ, ಜಾಯ್ಸನ್, ಶಿವಲಿಂಗಯ್ಯ, ಬಸಂತ್ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.