ವೇತನವಿಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ಕುವೆಂಪು ವಿ.ವಿ ಅತಿಥಿ ಉಪನ್ಯಾಸಕರು, ಏಜೆನ್ಸಿ ನೌಕರರು

ವೇತನ ನೀಡಲು ೩.೮೧ ಕೋ.ರು. ಬೇಕಿದೆ, ಆರ್ಥಿಕ ನೆರವಿಗಾಗಿ ಸರ್ಕಾರದ ಮೊರೆಹೋದ ವಿ.ವಿ

ಕುವೆಂಪು ವಿ.ವಿ 
    ಭದ್ರಾವತಿ: ಬಹುಪಾಲು ಅತಿಥಿ ಉಪನ್ಯಾಸಕರನ್ನು ಅವಲಂಬಿಸಿರುವ ಕುವೆಂಪು ವಿಶ್ವವಿದ್ಯಾಲಯ ಇದೀಗ ಅವರಿಗೆ ವೇತನ ನೀಡಲು ಸಾಧ್ಯವಾಗದೆ ಸರ್ಕಾರದಿಂದ ಆರ್ಥಿಕ ನೆರವು ಎದುರು ನೋಡುತ್ತಿದೆ. ಮಾರ್ಚ್ ತಿಂಗಳು ಮುಕ್ತಾಯಗೊಳ್ಳಲು ಇನ್ನೇನು ಎರಡು ದಿನಗಳು ಬಾಕಿ ಉಳಿದಿವೆ. ಜನವರಿಯಿಂದ ವೇತನವಿಲ್ಲದೆ ಖಾಲಿ ಜೇಬಿನಲ್ಲಿ ಉಪನ್ಯಾಸಕರು ತಮ್ಮ ವೃತ್ತಿ ಮುಂದುವರೆಸುತ್ತಿದ್ದಾರೆ. 
    ಅತಿಥಿ ಉಪನ್ಯಾಸಕರಿಗೆ ಮತ್ತು ಏಜೆನ್ಸಿ ನೌಕರರಿಗೆ ಕುವೆಂಪು ವಿಶ್ವವಿದ್ಯಾಲಯ ವೇತನ ಪಾವತಿಸುತ್ತಿದ್ದು, ಡಿಸೆಂಬರ್-೨೦೨೫ ಅಂತ್ಯದಿಂದ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿದೆ. ಇದರಿಂದಾಗಿ ಇದುವರೆಗೂ ವೇತನ ನೀಡಲು ಸಾಧ್ಯವಾಗಿಲ್ಲ. ಕುವೆಂಪು ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ ಮತ್ತು ಪದವಿ ಕಾಲೇಜುಗಳಲ್ಲಿ ಒಟ್ಟು ೩೭೭ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗಾಗಿ ಪ್ರತಿ ತಿಂಗಳು ಒಟ್ಟು ೧.೨೭ ಕೋ.ರು. ವೇತನ ಪಾವತಿಸಬೇಕಾಗಿದೆ. ಮಾರ್ಚ್ ತಿಂಗಳು ಸೇರಿ ಒಟ್ಟು ೩.೮೧ ಕೋ.ರು ವೇತನ ಬಾಕಿ ಉಳಿದಿದ್ದು, ಈ ಸಂಬಂಧ ವಿಶ್ವ ವಿದ್ಯಾಲಯ ಸರ್ಕಾರಕ್ಕೆ ಆರ್ಥಿಕ ನೆರವು ನೀಡುವಂತೆ ಪತ್ರ ಬರೆದು ಮನವಿ ಮಾಡಿದೆ. ಆದರೆ ಸರ್ಕಾರ ಇದುವರೆಗೂ ಯಾವುದೇ ಆರ್ಥಿಕ ನೆರವು ನೀಡಿಲ್ಲ. ಅಲ್ಲದೆ ಸಂಶೋಧನಾ ವಿದ್ಯಾರ್ಥಿಗಳ ಫೆಲೋಶಿಪ್‌ಗಳನ್ನು ಸಹ ನೀಡಲು ಸಾಧ್ಯವಾಗದೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಕೈಚೆಲ್ಲಿ ಕುಳಿತಿದೆ. 
    ಹೆಚ್ಚುವರಿ ಕೆಸೆಟ್, ನೆಟ್ ತರಗತಿಗಳನ್ನು ತೆಗೆದುಕೊಳ್ಳಲು ಈ ಹಿಂದೆ ಸೂಚಿಸಿದ್ದ ವಿಶ್ವವಿದ್ಯಾಲಯದ ನಡೆಯನ್ನು ಗೌರವಿಸಿದ್ದ ಅತಿಥಿ ಉಪನ್ಯಾಸಕರು ತರಗತಿಗಳನ್ನು ಹೆಚ್ಚುವರಿಯಾಗಿ ತೆಗೆದುಕೊಂಡಿದ್ದರು. ಅಲ್ಲದೆ ವಿಶ್ವವಿದ್ಯಾಲಯದ ಬಹುತೇಕ ಕಾರ್ಯಚಟುವಟಿಕೆಗಳನ್ನು ಅತಿಥಿ ಉಪನ್ಯಾಸಕರೇ ನಿರ್ವಹಣೆ ಮಾಡುತ್ತಿದ್ದಾರೆ. ಯುಗಾದಿ, ರಂಜಾನ್ ಹಬ್ಬಗಳ ಸಮಯದಲ್ಲಿ ಮತ್ತು ಆನಂತರವೂ ಖಾಲಿ ಜೇಬಿನಲ್ಲಿ ಅತಿಥಿ ಉಪನ್ಯಾಸಕರು ತಮ್ಮ ವೃತ್ತಿ ಮುಂದುವರೆಸಿಕೊಂಡು ಹೋಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. 
    ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲೇ ಕಾಲಹರಣ ಮಾಡುತ್ತಿದೆಯೆಂಬ ಆರೋಪಗಳಿವೆ. ಈ ನಡುವೆ ಶುಲ್ಕಗಳ ಪ್ರತಿಶತ ನೂರರಷ್ಟು ಹೆಚ್ಚಳದ ನಿರ್ಧಾರ ಮತ್ತು ತಾಂತ್ರಿಕ ಹಾಗು ವೃತ್ತಿಪರ ಶಿಕ್ಷಣದ ಮೇಲಿನ ವ್ಯಾಮೋಹದಿಂದ ಉಂಟಾದ ಒಟ್ಟಾರೆ ಪ್ರವೇಶಾತಿ ಕುಸಿತ, ದೂರ ಶಿಕ್ಷಣದ ರದ್ಧತಿಯಿಂದಾದ ಆದಾಯ ಕೊರತೆ, ಉಪ ಕುಲಪತಿ, ಕುಲಸಚಿವ ಹಾಗೂ ಹಣಕಾಸು ಇಲಾಖೆಯಲ್ಲಿನ ಸಮನ್ವಯದ ಕೊರತೆ ಹಾಗೂ ಅದಕ್ಷ ಹಣಕಾಸು ನಿರ್ವಹಣೆಯಿಂದಾಗಿ ವಿಶ್ವವಿದ್ಯಾಲಯ ಪ್ರಸ್ತುತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 
    ಈ ನಡುವೆ ವೇತನ ಕೇಳಲು ಹೋದ ಅತಿಥಿ ಉಪನ್ಯಾಸಕರನ್ನೇ ಅಪರಾಧಿಗಳಂತೆ ಕಂಡು, `ವೇತನವಿಲ್ಲದಿದ್ದರೆ ಬೇರೆ ಕೆಲಸ ಹುಡುಕಿ, ಪ್ರತಿಭಟನೆ ಮಾಡುವುದಿದ್ದರೂ ಮಾಡಿ. ಆದರೆ ಹಣವಿಲ್ಲದೆ ವೇತನ ನೀಡುವುದಿಲ್ಲ' ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹೇಳುತ್ತಿದೆ ಎಂಬ ಗಂಭೀರ ಆರೋಪ ಹಲವು ಅತಿಥಿ ಉಪನ್ಯಾಸಕರಿಂದ ಕೇಳಿಬರುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಅತಿಥಿ ಉಪನ್ಯಾಸಕರು ಕಾದು ನೋಡುವ ತಂತ್ರದ ಮೊರೆ ಹೋಗಿದ್ದು ವೇತನ ವಿಳಂಬವಾದರೆ ಕಾನೂನಿನ ಮೊರೆ ಹೋಗುವ ಹಾಗೂ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟಿಸುವ ಯೋಜನೆಯ ಲೆಕ್ಕಾಚಾರದಲ್ಲಿದ್ದಾರೆ.