ಸಂಭಾವ್ಯ ಅಪರಾಧ, ಕಾನೂನು ಉಲ್ಲಂಘನೆಗಳಿಗೆ ಕಡಿವಾಣ ಹಾಕಲು ಆಟೋಗಳಿಗೆ ವಿಶಿಷ್ಟ ಸಂಖ್ಯೆ
ಶಿವಮೊಗ್ಗ ಜಿಲ್ಲಾ ಪೊಲೀಸ್ ಕೈಗೊಂಡಿರುವ ಅಭಿಯಾನಕ್ಕೆ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಚಾಲನೆ
ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ, ರೋಟರಿ ಕ್ಲಬ್ ಸಭಾಂಗಣದಲ್ಲಿ ಪೊಲೀಸ್ ಉಪವಿಭಾಗದ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಗೆ ಪೂರಕ ದಾಖಲೆಗಳನ್ನು ಒದಗಿಸಿರುವ ಆಟೋ ರಿಕ್ಷಾಗಳಿಗೆ ವಿಶಿಷ್ಟ ಸಂಖ್ಯೆಯ ಸ್ಟಿಕ್ಕರ್‌ಗಳನ್ನು ಅಂಟಿಸುವ ಮೂಲಕ ಅಭಿಯಾನಕ್ಕೆ ಹೆಚ್ಚುವರಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ. ಕಾರಿಯಪ್ಪ ಚಾಲನೆ ನೀಡಿದರು.
ಭದ್ರಾವತಿ: ಆಟೋ ರಿಕ್ಷಾಗಳ ದಾಖಲೆಗಳನ್ನು ಪರಿಶೀಲಿಸಿ ಅವುಗಳಿಗೆ ವಿಶಿಷ್ಠ ಸಂಖ್ಯೆ ನೀಡುವ ಅಭಿಯಾನ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಆರಂಭಿಸಲಾಗಿದ್ದು, ಇದರಿಂದ ಆಟೋ ರಿಕ್ಷಾ ಪ್ರಯಾಣದ ವೇಳೆ ನಡೆಯಬಹುದಾದ ಸಂಭಾವ್ಯ ಅಪರಾಧಗಳಿಗೆ ಹಾಗು ಕಾನೂನು ಉಲ್ಲಂಘನೆಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ. ಕಾರಿಯಪ್ಪ ಹೇಳಿದರು.
ಅವರು ಬುಧವಾರ ನಗರದ ಉಂಬ್ಳೆಬೈಲು ರಸ್ತೆ, ರೋಟರಿ ಕ್ಲಬ್ ಸಭಾಂಗಣದಲ್ಲಿ ಪೊಲೀಸ್ ಉಪವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಗೆ ಪೂರಕ ದಾಖಲೆಗಳನ್ನು ಒದಗಿಸಿರುವ ಆಟೋ ರಿಕ್ಷಾಗಳಿಗೆ ವಿಶಿಷ್ಟ ಸಂಖ್ಯೆಯ ಸ್ಟಿಕ್ಕರ್‌ಗಳನ್ನು ಅಂಟಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಟೋ ರಿಕ್ಷಾಗಳಿಗೆ ಸಂಬಂಧಿಸಿದ ವಾಹನ ವಿಮೆ, ವಾಹನದ ನೋಂದಣಿ ಪತ್ರ, ಚಾಲಕನ ಚಾಲನಾ ಪರವಾನಗಿ ದಾಖಲೆ, ವಾಯು ಮಾಲಿನ್ಯ ತಪಾಸಣೆ ಮೊದಲಾದ ದಾಖಲೆಗಳನ್ನು ಪೊಲೀಸ್ ಇಲಾಖೆ ಪರಿಶೀಲಿಸುತ್ತದೆ. ದಾಖಲೆಗಳು ಸಮರ್ಪಕವಾಗಿದ್ದರೆ, ಅಂತಹ ವಾಹನಕ್ಕೆ 'ಬಿಡಿವಿಟಿ' ಎಂಬ ಅಕ್ಷರಗಳಿಂದ ಆರಂಭವಾಗುವ ವಿಶಿಷ್ಠ ಸಂಖ್ಯೆ ನೀಡಲಾಗುತ್ತದೆ ಎಂದರು.
ಆಟೋ ರಿಕ್ಷಾ ಮಾಲೀಕರು ತಮ್ಮ ಹೆಸರು, ವಿಳಾಸ ಹಾಗು ವಾಹನದ ನೋಂದಣಿ ಸಂಖ್ಯೆ ಮೊದಲಾದ ಮಾಹಿತಿಯನ್ನು ವಾಹನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಾಣುವಂತೆ ಪ್ರದರ್ಶಿಸುವ ವ್ಯವಸ್ಥೆ ಮಾಡಬೇಕೆಂದರು.
ಪೊಲೀಸ್ ಉಪವಿಭಾಗದ ಉಪ ವರಿಷ್ಠಾಧಿಕಾರಿ ಪ್ರಕಾಶ್ ರಾಥೋಡ್ ಮಾತನಾಡಿ, ಭದ್ರಾವತಿ ನಗರದಲ್ಲಿ ಸುಮಾರು ೭೦೦ ರಿಂದ ೮೦೦ ಆಟೋ ರಿಕ್ಷಾಗಳು ಸಂಚರಿಸುತ್ತಿದ್ದು, ಮೊದಲ ಹಂತದಲ್ಲಿ ೮೦ ಆಟೋ ರಿಕ್ಷಾಗಳಿಗೆ ವಿಶಿಷ್ಟ ಸಂಖ್ಯೆ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆ ಈ ಅಭಿಯಾನದ ಮುಖ್ಯ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಆಟೋ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು, ಪೂರಕ ದಾಖಲೆಗಳಿಲ್ಲದೆ ಆಟೋ ರಿಕ್ಷಾ ಚಾಲನೆ ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಪೊಲೀಸ್ ನಗರ ವೃತ್ತ ನಿರೀಕ್ಷಕಿ ಕೆ. ನಾಗಮ್ಮ, ಗ್ರಾಮಾಂತರ ವೃತ್ತ ನಿರೀಕ್ಷಕ ಚಿದಾನಂದ, ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕ ಚಂದ್ರಶೇಖರ್ ನಾಯ್ಕ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ಉಪ ನಿರೀಕ್ಷಕರು, ಸಹಾಯಕ ನಿರೀಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.