ಭಾಷಾವಾರು ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿರುವ ತಿಗಳ ಸಮಾಜ ಒಗ್ಗೂಡಲಿ : ಆರ್. ಮಧುಸೂಧನ್
ಭದ್ರಾವತಿ ತಾಲೂಕು ಪಂಚಾಯಿತಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ) ಅಧ್ಯಕ್ಷ, ಸಹಕಾರಿ ಧುರೀಣ ಬಿ.ಕೆ ಶಿವಕುಮಾರ್ ಉದ್ಘಾಟಿಸಿದರು.
ಭದ್ರಾವತಿ : ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜ ದೇಶದ ಹಲವು ಭಾಷಾವಾರು ಪ್ರಾಂತ್ಯಗಳಲ್ಲಿ ಅರಿತು ಹಂಚಿ ಹೊಂಗಿದ್ದು, ಇದೀಗ ಈ ಸಮಾಜ ತನ್ನ ಪರಂಪರೆ ಅರಿತುಕೊಳ್ಳುವ ಮೂಲಕ ಸಂಘಟಿತರಾಗಬೇಕಾಗಿದೆ ಎಂದು ಬೆಂಗಳೂರು ಬನ್ನೇರುಘಟ್ಟ, ಸಿ.ಕೆ ಪಾಳ್ಯ ವಿದ್ಯಾಸಂಸ್ಥೆ ವ್ಯವಸ್ಥಾಪಕ ಆರ್. ಮಧುಸೂದನ್ ಹೇಳಿದರು.
ಅವರು ಶನಿವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.
ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಮಹತ್ವದ ಜೊತೆಗೆ ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜ ಇದೀಗ ತನ್ನ ಪರಂಪರೆ ಅರ್ಥ ಮಾಡಿಕೊಳ್ಳುವ ಸಮಯ ಬಂದಿದೆ. ದೇಶದ ಬಹುದೊಡ್ಡ ಸಮಾಜಗಳಲ್ಲಿ ಇದು ಸಹ ಒಂದಾಗಿದ್ದು, ಈ ಸಮಾಜ ಬೇರೆ ಬೇರೆ ಹೆಸರುಗಳಲ್ಲಿ ಭಾಷಾವಾರು ಪ್ರಾಂತ್ಯಗಳಲ್ಲಿ ಗುರುತಿಸಿಕೊಂಡಿದೆ. ಹರಿದು ಹಂಚಿಹೋಗಿರುವ ಈ ಸಮಾಜವನ್ನು ಒಗ್ಗೂಡಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಬೇಕಾಗಿದೆ. ಇದೀಗ ಈ ಸಮಾಜವನ್ನು ಗುರುತಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜ ಕುರಿತು ಸಂಶೋಧನೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದ್ದು, ಇದರ ಕುರಿತು ಸಮಾಜದವರು ತಿಳಿದುಕೊಳ್ಳಬೇಕಾಗಿದೆ. ದೇಶಕ್ಕೆ ತನ್ನದೇ ಆದ ಪರಂಪರೆ, ಕೊಡುಗೆಗಳನ್ನು ಈ ಸಮಾಜ ನೀಡಿದೆ. ಇಂತಹ ಸಮಾಜದ ಉದಯಕ್ಕೆ ಕಾರಣರಾದ ಶ್ರೀ ಬನ್ನಿರಾಯಸ್ವಾಮಿ ಜಯಂತಿ ಆಚರಣೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದರು.
ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ) ಅಧ್ಯಕ್ಷ, ಸಹಕಾರಿ ಧುರೀಣ ಬಿ.ಕೆ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಉದ್ಯಮಿ ಬಿ.ಕೆ ಜಗನ್ನಾಥ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸದಸ್ಯ ಮಲ್ಲಿಕಾರ್ಜುನ್, ಮೆಸ್ಕಾಂ ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ, ಉಪತಹಸೀಲ್ದಾರ್ ಮಂಜಾನಾಯ್ಕ, ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದ ಪದಾಧಿಕಾರಿಗಳಾದ ಉಪಾಧ್ಯಕ್ಷ ಜಯರಾಮ್, ಕಾರ್ಯದರ್ಶಿ ಕೆ. ಮಾದಯ್ಯ, ಸಹ ಕಾರ್ಯದರ್ಶಿ ಬಿ.ಜಿ ಸಂತೋಷ್ ಕುಮಾರ್, ಖಜಾಂಚಿ ಸುನೀಲ, ಹಿರಿಯ ಮುಖಂಡರಾದ ವಿಷಕಂಠಪ್ಪ, ರಂಗಪ್ಪ, ಲಕ್ಷ್ಮಮ್ಮ, ವೆಂಕಟೇಶ್, ಮಾದಯ್ಯ, ಬಸವರಾಜಣ್ಣ, ಗಂಗಾನಾಥ್, ಚಂದ್ರಣ್ಣ ಹಾಗು ನಿರ್ದೇಶಕರು ಉಪಸ್ಥಿತರಿದ್ದರು.
ಸಮಾಜದ ಅಧ್ಯಕ್ಷ ಗಂಗಾರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಉಪಾಧ್ಯಕ್ಷೆ ಮಹಾದೇವಿ ಪ್ರಾರ್ಥಿಸಿದರು.