ಉಕ್ಕಿನ ನಗರದಲ್ಲಿ ಸಂಚಾರಿ ದಟ್ಟನೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಅಧಿಸೂಚನೆ : ಉಪಾಧೀಕ್ಷಕ ಪ್ರಕಾಶ್ ರಾಥೋಡ್

ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಚಾರಿ ಪೊಲೀಸರಿಗೆ ಆದೇಶ, ಉಲ್ಲಂಘಿಸಿದ್ದಲ್ಲಿ ಸ್ಥಳದಲ್ಲಿಯೇ ದಂಡ 

ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ 
    ಭದ್ರಾವತಿ : ಸಂಚಾರ ಪೊಲೀಸ್ ಠಾಣಾ ನಗರಸಭೆ ವ್ಯಾಪ್ತಿಯಲ್ಲಿ ದಿನೇ ದಿನೇ ವಾಹನಗಳ ದಟ್ಟನೆ ಮತ್ತು ಸಂಚಾರ ದಟ್ಟನೆ ಹೆಚ್ಚಾಗುತ್ತಿದ್ದು, ಪದೇ ಪದೇ ಟ್ರಾಫಿಕ್ ಜಾಮ್ ಮತ್ತು ಅಪಘಾತದಿಂದಾಗಿ ಅನೇಕ ಸಾವುನೋವುಗಳು ಸಂಭವಿಸುತ್ತಿವೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ವಾಹನ ನಿಲುಗಡೆ ನಿಷೇಧ, ಏಕ ಮುಖ ಸಂಚಾರ ಮತ್ತು ದಿನ ಬಿಟ್ಟು ದಿನ ವಾಹನಗಳ ನಿಲುಗಡೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಜಿಲ್ಲಾಧಿಕಾರಿಗಳಾದ ಪ್ರಭಲಿಂಗ ಕವಳಿಕಟ್ಟೆಯವರು ಅಧಿಸೂಚನೆ ಹೊರಡಿಸಿ ಆದೇಶಿಸಿದ್ದಾರೆಂದು ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ತಿಳಿಸಿದರು. 
    ಈ ಕುರಿತು ಸೋಮವಾರ ಮಾಹಿತಿ ನೀಡಿ, ಭದ್ರಾವತಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು ೩.೩೯,೮೪೬ ಜನಸಂಖ್ಯೆ ಇದ್ದು, ಪ್ರತಿ ದಿನ ಕೆಲಸದ ನಿಮಿತ್ತ ಹೊರಗಿನಿಂದ ಸಾವಿರಾರು ಜನರು ನಗರಕ್ಕೆ ಭೇಟಿ ಕೊಡುತ್ತಿರುತ್ತಾರೆ. ನಗರದಲ್ಲಿ ಒಂದು ರಾಷ್ಟ್ರೀಯ ಹೆದ್ದಾರಿ (ಎನ್.ಎಚ್-೬೯), ಮೂರು ರಾಜ್ಯ ಹೆದ್ದಾರಿಗಳು (ಎಸ್.ಎಚ್-೬೫, ಎಸ್.ಎಚ್-೬೮ ಮತ್ತು ಎಸ್.ಎಚ್-೧೧೬) ಹಾದು ಹೋಗಿರುತ್ತವೆ. ನಗರದಲ್ಲಿ ಮತ್ತು ಹೆದ್ದಾರಿಗಳಲ್ಲಿ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ದ್ವಿ-ಚಕ್ರ, ತ್ರಿ-ಚಕ್ರ, ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚು ಚಕ್ರಗಳುಳ್ಳ ಲಘು ಮತ್ತು ಭಾರಿ ವಾಹನಗಳು ಸಂಚರಿಸುತ್ತಿವೆ. ಇದರಿಂದಾಗಿ ಸಂಚಾರ ಪೊಲೀಸ್ ಠಾಣಾ ನಗರಸಭೆ ವ್ಯಾಪ್ತಿಯಲ್ಲಿ ದಿನೇ ದಿನೇ ವಾಹನಗಳ ದಟ್ಟನೆ ಮತ್ತು ಸಂಚಾರ ದಟ್ಟನೆ ಹೆಚ್ಚಾಗುತ್ತಿದ್ದು, ಪದೇ ಪದೇ ಟ್ರಾಫಿಕ್ ಜಾಮ್ ಮತ್ತು ಅಪಘಾತದಿಂದಾಗಿ ಅನೇಕ ಸಾವುನೋವುಗಳು ಸಂಭವಿಸುತ್ತಿವೆ. ಈ ಹಿನ್ನಲೆಯಲ್ಲಿ ಇಲಾಖೆಯಿಂದ ವಾಹನಗಳ ದಟ್ಟನೆ ಮತ್ತು ಸಂಚಾರ ದಟ್ಟನೆ ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು. 
    ಜಿಲ್ಲಾಧಿಕಾರಿಗಳು ಸಲ್ಲಿಕೆಯಾದ ಪ್ರಸ್ತಾವನೆಯನ್ನು ಪರಿಗಣಿಸಿ, ಸಾರ್ವಜನಿಕ ಹಿತ ದೃಷ್ಟಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮೋಟಾರು ವಾಹನ ಕಾಯ್ದೆ ೧೯೮೮ ಕಲಂ ೧೧೫ ಮತ್ತು ೧೧೭ ರ ಅನ್ವಯ ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು ೧೯೮೯ ರ ನಿಯಮ ೨೨೧(ಎ)(೫)&(೬) ರನ್ವಯ ವಾಹನ ನಿಲುಗಡೆ ನಿಷೇಧ ಸ್ಥಳ, ಏಕ ಮುಖ ಸಂಚಾರ ಮತ್ತು ದಿನ ಬಿಟ್ಟು ದಿನ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಅನುಸೂಚನೆ ಹೊರಡಿಸಿ ಕ್ರಮ ವಹಿಸುವಂತೆ ಆದೇಶಿಸಿದ್ದಾರೆಂದರು. 


    ವಾಹನಗಳ ನಿಲುಗಡೆ ನಿಷೇಧ : 
    ನಗರಸಭೆ ಮುಂಭಾಗದ ರಸ್ತೆಯಲ್ಲಿ ನಗರಸಭೆ ಬಲಭಾಗದ ಗೇಟ್‌ನಿಂದ ನೇತಾಜಿ ಆಟೋ ನಿಲ್ದಾಣ ಕಮಾನ್‌ವರೆಗಿನ ೯೦ ಮೀಟರ್ ರಸ್ತೆಯಲ್ಲಿ, ರಂಗಪ್ಪ ವೃತ್ತ ಸಮೀಪ ನ್ಯಾಯಾಲಯ ಸಂಕೀರ್ಣದ ಮುಂಭಾಗದ ರಸ್ತೆಯಲ್ಲಿ ಜೈ ಭೀಮ್ ನಗರ ಕ್ರಾಸ್ ನಿಂದ ಪೊಲೀಸ್ ನಗರ ವೃತ್ತ ನಿರೀಕ್ಷಕರ ಕಛೇರಿಗೆ ಹೋಗುವ ತಿರುವಿನ ವರೆಗಿನ ೮೦ ಮೀಟರ್ ರಸ್ತೆಯಲ್ಲಿ, ನ್ಯಾಯಾಲಯ ಸಂಕೀರ್ಣದ ಮುಂಭಾಗದ ರಸ್ತೆಯಲ್ಲಿ ರಂಗಪ್ಪ ವೃತ್ತ ಸವಿತ ಮೆಡಿಕಲ್‌ನಿಂದ ಜಿ. ಸರ್ವಿಸ್‌ವರೆಗೆ ನ್ಯಾಯಾಲಯಗಳ ಸಂಕೀರ್ಣ ಮುಂಭಾಗದ ೬೦ ಮೀಟರ್ ರಸ್ತೆಯಲ್ಲಿ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ ಸಮೀಪ ಡಾ. ರಾಜ್ ಕುಮಾರ್ ರಸ್ತೆಯಲ್ಲಿ ಎಚ್.ಪಿ. ಪೆಟ್ರೋಲ್ ಬಂಕ್(ಶಿವಶಂಕರಯ್ಯ ಪೆಟ್ರೋಲ್ ಬಂಕ್)ನಿಂದ ಭದ್ರಾ ವೈನ್ಸ್ ಸ್ಟೋರ್ ಮುಖ್ಯ ದ್ವಾರದವರೆಗೆ ಒಟ್ಟು ೧೨೦ ಮೀಟರ್ ರಸ್ತೆಯಲ್ಲಿ, ಅಂಡರ್ ಬ್ರಿಡ್ಜ್ ಬಲ ಭಾಗದಿಂದ ಪಾಕೀಝ ಚಿಕನ್ ಸೆಂಟರ್  ಮುಖ್ಯದ್ವಾರದವರೆಗೆ ಒಟ್ಟು ೧೫೦ ಮೀಟರ್ ರಸ್ತೆಯಲ್ಲಿ, ಅಂಡರ್ ಬ್ರಿಡ್ಜ್ ಎಡಭಾಗದಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಕೆನರಾ ಬ್ಯಾಂಕ್ ಮುಖ್ಯದ್ವಾರದವರೆಗೆ ಒಟ್ಟು ೨೦೦ ಮೀಟರ್ ರಸ್ತೆಯಲ್ಲಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆಗಮನ ದ್ವಾರದಿಂದ ನಿರ್ಗಮನ ದ್ವಾರದವರೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಬಿ.ಎಚ್ ರಸ್ತೆಯಲ್ಲಿ ಒಟ್ಟು ೮೦ ಮೀಟರ್ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. 


    ಏಕ ಮುಖ ಸಂಚಾರ ಮಾರ್ಗ : 
ಹಳೇನಗರದ ಬಸವೇಶ್ವರ ವೃತ್ತದಿಂದ ಪರಿಮಳ ಹೋಟೆಲ್ ಕಡೆಗೆ ಹೋಗುವ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸುವುದು ಹಾಗೂ ಪರಿಮಳ ಹೊಟೇಲ್ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ಬರುವ ವಾಹನವನ್ನು ನಿಷೇಧಿಸಿ ಒಟ್ಟು ೧೩೦ ಮೀಟರ್ ರಸ್ತೆಯಲ್ಲಿ ಮತ್ತು ನಗರಸಭೆ ಸಮೀಪದ ಮಾಧವಚಾರ್ ವೃತ್ತದಿಂದ ಅಮರಶಿಲ್ಪಿ ಜಕಣಚಾರಿ ಸೇತುವೆ (ಕಮಾನು ಸೇತುವೆ) ಮೇಲೆ ತಿಮ್ಮಯ್ಯ ಮಾರ್ಕೆಟ್ ಕಡೆಗೆ ಸಂಚರಿಸಲು ಹಾಗೂ ತಿಮ್ಮಯ್ಯ ಮಾರ್ಕೆಟ್ ಕಡೆಯಿಂದ ಮಾಧವಚಾರ್ಯ ವೃತ್ತದ ಕಡೆಗೆ ಸಂಚರಿಸಲು ಹಳೇ ಸೇತುವೆ(ಭದ್ರಾ ಸೇತುವೆ) ಮೇಲೆ ವಾಹನಗಳ ಏಕಮುಖ ಸಂಚಾರಕ್ಕೆ ಆದೇಶಿಸಲಾಗಿದೆ. 
    ಪರ್ಯಾಯ ವಾಹನ ನಿಲುಗಡೆ: 
    ಮಾಧವಚಾರ್ ವೃತ್ತದ ಎಡಭಾಗದ ರೇಣುಕಾ ಕಿಡ್ಸ್‌ನಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೃತ್ತ ಕೆನರಾ ಬ್ಯಾಂಕ್‌ವರೆಗೆ ೩೦೦ ಮೀಟರ್ ವರೆಗೆ ದಿನ ಬಿಟ್ಟು ದಿನ ನಿಲುಗಡೆ ವ್ಯವಸ್ಥೆ. (ರಸ್ತೆಯ ಎಡ ಭಾಗದಲ್ಲಿ (ಎಲ್‌ಎಚ್‌ಎಸ್) ಪ್ರತಿ ತಿಂಗಳ ೧. ೩. ೫, ೭, ೯, ೧೧, ೧೩, ೧೫, ೧೭, ೧೯, ೨೧, ೨೩, ೨೫ ಮತ್ತು ೨೭. ೨೯ನೇ ತಾರೀಖಿನ ದಿನಗಳಂದು ವಾಹನ ನಿಲುಗಡೆ)
    ಮಾಧವಚಾರ್ ವೃತ್ತ ವೃತ್ತ ಬಲಭಾಗ ನೂತನ್ ಜ್ಯೂವೆಲರ್ಸ್‌ನಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೃತ್ತದವರೆಗೆ ೩೦೦ ಮೀಟರ್ ರಸ್ತೆ ದಿನ ಬಿಟ್ಟು ದಿನ ನಿಲುಗಡೆ ವ್ಯವಸ್ಥೆ ( ರಸ್ತೆಯ ಬಲ ಭಾಗದಲ್ಲಿ (ಆರ್‌ಎಚ್‌ಎಸ್) ಪ್ರತಿ ತಿಂಗಳ ೨, ೪, ೬, ೮, ೧೦, ೧೨, ೧೪, ೧೬, ೧೮, ೨೦, ೨೨, ೨೪, ೨೬, ೨೮ ಮತ್ತು ೩೦ನೇ ತಾರೀಖಿನ ದಿನಗಳಂದು ವಾಹನ ನಿಲುಗಡೆ)
ಮಾಧವಚಾರ್ ವೃತ್ತದ ಎಡಭಾಗ ನಿಧಿ ಜ್ಯೂವೆಲರ್ಸ್‌ನಿಂದ ಹಳೇನಗರ ಪೊಲೀಸ್ ಠಾಣೆಯ ಮುಂಭಾಗದವರೆಗೆ ೨೦೦ ಮೀಟರ್ ವರೆಗೆ ದಿನ ಬಿಟ್ಟು ದಿನ ನಿಲುಗಡೆ ವ್ಯವಸ್ಥೆ ( ರಸ್ತೆ ಎಡ ಭಾಗದಲ್ಲಿ(ಎಲ್‌ಎಚ್‌ಎಸ್) ೧, ೩, ೫, ೭, ೯, ೧೧, ೧೩, ೧೫, ೧೭, ೧೯, ೨೧, ೨೩, ೨೫, ೨೭, ೨೯ ಮತ್ತು ೩೧ನೇ ತಾರೀಖಿನ ದಿನಗಳಂದು ವಾಹನ ನಿಲುಗಡೆ)
    ಮಾಧವಚಾರ್ ವೃತ್ತ ಬಲಭಾಗದ ರೇಣುಕ ಕಿಡ್ಸ್‌ನಿಂದ ಹಳೇನಗರ ಪೊಲೀಸ್ ಠಾಣೆವರೆಗೆ ೨೦೦ ಮೀಟರ್ ರಸ್ತೆ ದಿನ ಬಿಟ್ಟು ದಿನ ನಿಲುಗಡೆ ವ್ಯವಸ್ಥೆ(ರಸ್ತೆಯ ಬಲ ಭಾಗದಲ್ಲಿ (ಆರ್‌ಎಚ್‌ಎಸ್) ಪ್ರತಿ ತಿಂಗಳ ೨, ೪, ೬, ೮, ೧೦, ೧೨, ೧೪, ೧೬, ೧೮, ೨೦, ೨೨, ೨೪, ೨೬, ೨೮ ಮತ್ತು ೩೦ನೇ ತಾರೀಖಿನ ದಿನಗಳಂದು ವಾಹನ ನಿಲುಗಡೆ) ಸೂಚಿಸಿ ಆದೇಶಿಸಲಾಗಿದೆ ಎಂದರು. 
ಪ್ರತಿಯೊಬ್ಬರು ಕಡ್ಡಾಯವಾಗಿ ಆದೇಶ ಪಾಲಿಸುವ ಮೂಲಕ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಬೇಕು. ಒಂದೇ ವೇಳೆ ಉಲ್ಲಂಘನೆ ಕಂಡುಬಂದಲ್ಲಿ ಸ್ಥಳದಲ್ಲಿಯೇ ದಂಡ ವಸೂಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 
    ಸಂಚಾರಿ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಆಪ್ ಕೂಡ ಸಿದ್ದಪಡಿಸಲಾಗಿದೆ. ಒಂದೇ ಸ್ಥಳದಲ್ಲಿ ಕುಳಿತು ಸಂಚಾರಿ ವ್ಯವಸ್ಥೆ ಮೇಲೆ ನಿಗಾ ವಹಿಸಬಹುದಾಗಿದೆ. ರಸ್ತೆ ಸಂಚಾರಿ ನಿಯಮ ಉಲ್ಲಂಘನೆಯನ್ನು ಪತ್ತೆ ಮಾಡಿ ಸವಾರರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಯಾವುದೇ ಕಾರಣಕ್ಕೂ ಕಣ್ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿವರಿಸಿದರು. 
    ನಗರ ವೃತ್ತ ನಿರೀಕ್ಷಕಿ ಕೆ. ನಾಗಮ್ಮ, ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕ ಚಂದ್ರಶೇಖರ ನಾಯ್ಕ ಉಪಸ್ಥಿತರಿದ್ದರು.