ಮಾ.೪ರಂದು ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಗುರು ನಿವಾಸ ಉದ್ಘಾಟನೆ
ಕೆ.ಆರ್ ಸುಬ್ಬರಾವ್
ಭದ್ರಾವತಿ : ಭದ್ರಾನದಿ ತೀರದ ನಗರದ ಶ್ರೀ ಶೃಂಗೇರಿ ಶಂಕರ ಮಠದ ಶಾಖೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗುರುನಿವಾಸವನ್ನು ಮಾ.೪ರಂದು ಬೆಳಿಗ್ಗೆ ೧೧.೩೦ಕ್ಕೆ ಶ್ರೀ ಶೃಂಗೇರಿ ಶಂಕರ ಮಠದ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರು ಉದ್ಘಾಟಿಸುವರು ಎಂದು ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ತಿಳಿಸಿದರು.
ಅವರು ಸೋಮವಾರ ಈ ಕುರಿತು ಮಾಹಿತಿ ನೀಡಿ, ಶ್ರೀ ಶಾರದಾ ಮಾತೆ, ಶ್ರೀ ಚಂದ್ರಮೌಳೀಶ್ವರ, ಶ್ರೀ ಗಣೇಶ ದೇವರುಗಳ ಕೃಪೆಯಿಂದ ಹಾಗೂ ಉಭಯ ಜಗದ್ಗುರುಗಳ ಪರಮಾನುಗ್ರಹದಿಂದ ಮತ್ತು ಭಕ್ತರು, ದಾನಿಗಳ ಸಹಕಾರದಿಂದ ನಗರದಲ್ಲಿ ಶ್ರೀ ಶೃಂಗೇರಿ ಶಂಕರ ಮಠದ ಶಾಖೆಯನ್ನು ಹೆಚ್ಚಿನ ಶ್ರಮವಹಿಸಿ ಸ್ಥಾಪಿಸಲಾಯಿತು. ದೇವಸ್ಥಾನ, ಗೋ ಶಾಲೆ, ಸಮುದಾಯ ಭವನ, ಪಾಕಶಾಲೆ, ಉದ್ಯಾನವನ ನಿರ್ಮಿಸಲಾಗಿದ್ದು, ಶ್ರೀ ಮಠವನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗಿದೆ. ಇದೀಗ ಗುರುನಿವಾಸ ನಿರ್ಮಿಸಲಾಗಿದೆ ಎಂದರು.
ಮಾ.೪ರ ಬುಧವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗುರುಗಣೇಶ ಪೂಜೆ, ಪುಣ್ಯಾಹವಾಚನ, ಶ್ರೀ ಮಹಾಗಣಪತಿ ಹೋಮ, ಬೆಳಿಗ್ಗೆ ೧೧.೩೦ಕ್ಕೆ ಶ್ರೀ ಜಗದ್ಗುರುಗಳ ಉಪಸ್ಥಿತಿಯಲ್ಲಿ ಪೂರ್ಣಾಹುತಿ, ಶ್ರೀ ಗುರುನಿವಾಸದ ಉದ್ಘಾಟನೆ ನಂತರ ಸನ್ನಿಧಿಯಲ್ಲಿ ಧೂಳಿಪಾದಪೂಜೆ, ಭಿಕ್ಷಾವಂದನೆ, ಗುರುಪಾದುಕಾಪೂಜೆ, ವಿವಿಧ ಸಂಘ ಸಂಸ್ಥೆಗಳಿಂದ ಫಲ ಸಮರ್ಪಣೆ ನಂತರ ಶ್ರೀ ಶ್ರೀ ಜಗದ್ಗುರುಗಳವರಿಂದ ಫಲ-ಮಂತ್ರಾಕ್ಷತೆ, ರಜತ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಪ್ರಾರಂಭದಿಂದಲೂ ಹಾಗೂ ಈಗಲೂ ಸೇವೆ ಸಲ್ಲಿಸುತ್ತಿರುವವರಿಗೆ ಗೌರವ ಸಮರ್ಪಣೆ ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ಹಾಗೂ ಮಹಾಪ್ರಸಾದ ವಿನಿಯೋಗ. ಸಂಜೆ ೫.೩೦ರಿಂದ ಶ್ರೀ ಶ್ರೀ ಸನ್ನಿಧಾನಂಗಳವರಿಂದ ಅನುಗ್ರಹ ಭಾಷಣ, ನಂತರ ಶ್ರೀ ಚಂದ್ರಮೌಳೀಶ್ವರ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಶ್ರೀ ಮಠದ ಪ್ರಮುಖರಾದ ಕೆ.ಎಸ್ ನಾಗರಾಜ್, ಶಾಂತಕುಮಾರ್, ಎ.ಎನ್ ಸುರೇಶ್, ಕೆ.ಎನ್ ಶ್ರೀಹರ್ಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.