ಏ.30ರಂದು ವೈಷ್ಣವ ಸಂಸ್ಥಾಪಕರ ಹೈಟೆಕ್ ದೇವಸ್ಥಾನ ಉದ್ಘಾಟನೆ

ಶ್ರೀ ಮಹಾವಿಷ್ಣು ಮೃತ್ಯುಂಜಯ, ಅಭಯಹಸ್ತ ಶ್ರೀ ವೀರಾಂಜನೇಯಸ್ವಾಮಿ ಮೂರ್ತಿಗಳ ಪ್ರತಿಷ್ಠಾಪನೆ


ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಮನೆ ವಾರ್ಡ್ ನಂ. 10ರ ವಿಜಯನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತಾಲೂಕು ವೈಷ್ಣವ ಸಂಸ್ಥಾಪಕರ ಹೈಟೆಕ್ ದೇವಸ್ಥಾನ. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಹೊಸಮನೆ ವಾರ್ಡ್ ನಂ. 10ರ ವಿಜಯನಗರದಲ್ಲಿ ನೂತನವಾಗಿ ತಾಲೂಕು ವೈಷ್ಣವ ಸಂಸ್ಥಾಪಕರ ಹೈಟೆಕ್ ದೇವಸ್ಥಾನ ನಿರ್ಮಾಣಗೊಂಡಿದ್ದು, ಏ.30ರ ಗುರುವಾರ ದೇವಸ್ಥಾನ ಲೋಕಾರ್ಪಣೆಗೊಳ್ಳಲಿದೆ. 
    ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ದೇವಸ್ಥಾನದ ಪ್ರಧಾನ ಅರ್ಚಕ ಎನ್. ಗೋವಿಂದರಾಜುರವರ ಕುಟುಂಬಸ್ಥರು ಈ ದೇವಸ್ಥಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವಿಐಎಸ್ಎಲ್ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಗೋವಿಂದರಾಜುರವರು ತಮಗೆ ಸೇರಿರುವ ಸ್ವಂತ ಜಾಗದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸ್ವಲ್ಪ ಜಾಗವನ್ನು ದಾನವಾಗಿ ನೀಡಿದ್ದಾರೆ. ಅಲ್ಲದೆ ತಮ್ಮ ನಿವೃತ್ತಿ ಹಣದಲ್ಲಿ ಬಹುತೇಕ ಪಾಲು ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಸಮರ್ಪಿಸಿದ್ದಾರೆ. ಈ ನಡುವೆಯೂ ಆರ್ಥಿಕ ಸಂಕಷ್ಟ ಎದುರಾದ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು, ದಾನಿಗಳು ಹಾಗು ಭಕ್ತರಿಂದ ಹಣ ಸಂಗ್ರಹಿಸಿ ಇದೀಗ ಪೂರ್ಣಗೊಳಿಸಿದ್ದಾರೆ. ಗೋವಿಂದರಾಜುರವರ ತಂದೆ ದಿವಂಗತ ನರಸಿಂಹಯ್ಯರವರು ದೇವಸ್ಥಾನ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು. ತಂದೆಯವರ ಕನಸು ನನಸಾಗಿಸಿದ್ದಾರೆ.   
    ಆಲಯ ಪ್ರವೇಶ ಹಾಗು ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಬುಧವಾರ ಬೆಳಿಗ್ಗೆ ಮಹಾಗಣಪತಿ ಪೂಜೆ, ರಕ್ಷಾ ಬಂಧನ, ಧ್ವಜಾರೋಹಣ, ಮಹಾಗಣಪತಿ ಹೋಮ, ವಾಸುದೇವಾ ಪುಣ್ಯಾಹ, ನವಗ್ರಹ ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ಆಧಿವಾಸಗಳು ಹಾಗು ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ  ಹಾಗು ಸಂಜೆ ವಿಷ್ಣು ಸಹಸ್ರನಾಮ ಪಾರಾಯಣ, ದ್ವಾರ ತೋರಣ, ಕುಂಭ ಪೂಜೆ, ಶಯ್ಯಾದಿವಾಸ, ತತ್ವನ್ಯಾಸ, ಪ್ರಾಣ ಪ್ರತಿಷ್ಠಾಪನ ಹೋಮ, ಮಹಮಂಗಳಾರತಿ-ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
       ಏ.30ರ ಗುರುವಾರ ಬ್ರಾಹ್ಮಿ ಮುಹೂರ್ತದಲ್ಲಿ ಆಯ ಪ್ರವೇಶನ, ಗೋಪೂಜೆ, ಗಂಗಾಪೂಜೆ, ಸುಮಂಗಳಿಯರಿಂದ ದೇವರಿಗೆ ಅಭಿಷೇಕ, ಮಹಾಪ್ರತಿಷ್ಠೆ ಮುಂತಾದ ಅಷ್ಟವದಾನ ಸೇವೆ, ಬಿಂಬದರ್ಶನ ಹಾಗು ಪ್ರತಿಷ್ಠಾಪನಾ ಹವನಗಳು ಹಾಗು ಶ್ರೀ ನರಸಿಂಹಸ್ವಾಮಿ ತಾರಕ ಹೋಮ, ಮಹಾ ಪೂರ್ಣಾಹುತಿ, ತೀರ್ಥ ವಿನಿಯೋಗ ಜರುಗಲಿವೆ. 


    ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಗಳು: 
    ಶ್ರೀ ಮಹಾವಿಷ್ಣು ಮೃತ್ಯುಂಜಯ ಮತ್ತು ಅಭಯ ಹಸ್ತ ಶ್ರೀ ವೀರಾಂಜನೇಯಸ್ವಾಮಿ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ.  ಅಲ್ಲದೆ ದೇವಸ್ಥಾನ ಮೇಲ್ಭಾಗದಲ್ಲಿ 3 ಕಳಸಗಳು ಪ್ರತಿಷ್ಠಾಪನೆಗೊಳ್ಳಲಿವೆ. 
    ಅರ್ಚಕ ರಮೇಶ್ ಭಟ್ ತರಳಿಮಠರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು : 
ಕಾಗದ ನಗರ ನಾಗರಕಟ್ಟೆ ದೇವಸ್ಥಾನದ ಪ್ರಧಾನ ಅರ್ಚಕ ರಮೇಶ್ ಭಟ್ ತರಳಿಮಠರವರ ಪ್ರಧಾನ ಪೌರೋಹಿತ್ಯದಲ್ಲಿ ಧಾರ್ಮಿಕ ಆಚರಣೆಗಳು ಜರುಗಲಿದ್ದು, ಇವರೊಂದಿಗೆ ಅರ್ಚಕರಾದ ಕೆ.ಪಿ ನರಸಿಂಹಮೂರ್ತಿ, ಸುರ್ದಶನಮೂರ್ತಿ, ಕೇಶವಮೂರ್ತಿ, ರವಿ ಮತ್ತು ನರಸಿಂಹಚಾರ್ ರವರನ್ನೊಳಗೊಂಡ ತಂಡ ಸಹ ಪಾಲ್ಗೊಳ್ಳಲಿದೆ. 
    ಶಾಸಕರು, ಗಣ್ಯರ ಉಪಸ್ಥಿತಿ: 
    ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ನಗರಸಭೆ  ಅಧ್ಯಕ್ಷೆ ಗೀತಾ ರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್,  ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ,   ಸದಸ್ಯ ಬಿ.ಕೆ ಮೋಹನ್, ಮಣಿ ಎಎನ್ಎಸ್, ಅನಿತಾ ಮಲ್ಲೇಶ್, ಚನ್ನಪ್ಪ, ವಿ. ಕದಿರೇಶ್, ಸುದೀಪ್ ಕುಮಾರ್ ಹಾಗು ಮುಖಂಡರಾ ಎಸ್. ಕುಮಾರ್, ರವಿಕುಮಾರ್, ಶಿವು ಪಾಟೀಲ್, ಬಸವರಾಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.