೬ ದಿನಗಳ ಉಚಿತ ಬೇಸಿಗೆ ಮಕ್ಕಳ ಶಿಬಿರಕ್ಕೆ ಚಾಲನೆ
ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಸೋಮವಾರ ೬ ದಿನಗಳ ಉಚಿತ ಬೇಸಿಗೆ ಮಕ್ಕಳ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಭದ್ರಾವತಿ : ಹಳೇನಗರ ವ್ಯಾಪ್ತಿಯ ಗಾಂಧಿನಗರ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಸೋಮವಾರ ೬ ದಿನಗಳ ಉಚಿತ ಬೇಸಿಗೆ ಮಕ್ಕಳ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾರವರು, ದೇವರು ಎಲ್ಲರಿಗೂ ತಮ್ಮ-ತಮ್ಮೊಳಗೆ ಅವರಿಗೆ ಬೇಕಾದ ವಿಶೇಷ ಪ್ರತಿಭೆಗಳನ್ನು ನೀಡಿರುತ್ತಾನೆ. ಮಕ್ಕಳಿರುವಾಗಲೇ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಹಿರಿಯರು ಪ್ರೋತ್ಸಾಹಿಸಬೇಕು. ಅದಕ್ಕೆ ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು.
೬ ದಿನಗಳು ನಡೆಯುವ ಈ ಉಚಿತ ಶಿಬಿರಕ್ಕೆ ಧರ್ಮ ಕೇಂದ್ರದ ಭಕ್ತರು ಸಹಕರಿಸುತ್ತಿದ್ದು, ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳುಹಿಸಿ ಕೊಡುತ್ತಿದ್ದಾರೆ. ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಆಧ್ಯಾತ್ಮಿಕ, ಸಾಮಾಜಿಕ, ನೈತಿಕ ಮತ್ತು ಅನ್ಯೋನ್ಯತೆಯ ಸಹಕಾರ ಮನೋಭಾವ ರೂಢಿಸಿಕೊಳ್ಳುವುದನ್ನು ಕಲಿಸಿಕೊಡಲಾಗುವುದು.
೧ ರಿಂದ ೯ನೇ ತರಗತಿ ಮಕ್ಕಳಿಗೆ ಶಿಬಿರ ನಡೆಸಲಾಗುತ್ತಿದ್ದು, ಪ್ರತಿದಿನ ಆಟ, ಪಾಠ, ಧ್ಯಾನ, ಕಲಿಕೆ, ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಧರ್ಮ ಕೇಂದ್ರದ ಶಿಕ್ಷಕಿಯರಿಂದ ಶಿಕ್ಷಣ ಪಡೆಯಲಿದ್ದು, ತರಗತಿಗಳ ಅನುಸಾರವಾಗಿ ಗುಂಪುಗಳನ್ನಾಗಿ ವಿಂಗಡಿಸಿ, ದಿನನಿತ್ಯದ ಕ್ರಿಯಾ ಚಟುವಟಿಕೆ ನಡೆಸಲಾಗುವುದು. ಪ್ರತಿದಿನ ಮಕ್ಕಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಉಚಿತವಾಗಿ ಮಾಡಲಾಗಿದ್ದು, ಬೆಳಗ್ಗೆ ೮:೩೦ ರಿಂದ ೧ ಗಂಟೆವರೆಗೆ ಶಿಬಿರ ನಡೆಸಲಾಗುವುದು ಎಂದು ಶಿಬಿರದ ನಿರ್ದೇಶಕಿ ಸಿಸ್ಟರ್ ತೆರೇಸಾರವರು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಲಿಲ್ಲಿ ಕಲ್ಲಿಹಾಳ್ ಆಗಮಿಸಿ ಮಾತನಾಡಿದರು. ಕಾರ್ಯದರ್ಶಿ ಎಲಿಸಾ ಲಾರೆನ್ಸ್, ಸೆಲೀನ ಬ್ಯಾಪ್ ಟಿಸ್ಟ್ , ಧರ್ಮ ಕೇಂದ್ರದ ಹಿರಿಯರಾದ ಪೌಲ್ ಡಿಸೋಜಾ ಉಪಸ್ಥಿತರಿದ್ದರು. ಶಿಕ್ಷಕರು, ಮಕ್ಕಳು, ಭಕ್ತಾದಿಗಳು ಪಾಲ್ಗೊಂಡಿದ್ದರು. ಪ್ರಿಯ ನಿರೂಪಿಸಿ, ರೇಷ್ಮಾ ಸ್ವಾಗತಿಸಿ, ಪ್ರೀತಿ ವಂದಿಸಿದರು.
