ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಹೆಜ್ಜೇನು ದಾಳಿ : ೧೦ಕ್ಕೂ ಹೆಚ್ಚು ಮಂದಿಗೆ ಕಡಿತ
ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣ.
ಭದ್ರಾವತಿ : ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿದ್ದವರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿ ಸುಮಾರು ೧೦ಕ್ಕೂ ಹೆಚ್ಚು ಮಂದಿ ಹೆಜ್ಜೇನು ಕಡಿತಕ್ಕೆ ಒಳಗಾಗಿರುವ ಘಟನೆ ನಡೆದಿದೆ.
ಜೈನ್ ಸಮುದಾಯದವರು ಕ್ರೀಡಾಂಗಣದ ಒಳಭಾಗದ ಮುಖ್ಯ ಅಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದ್ದು, ಕ್ರೀಡಾಕೂಟ ಆರಂಭದ ಸಂದರ್ಭದಲ್ಲಿ ಗುಂಪು ಸೇರಿದ್ದ ಸ್ಥಳದ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಇದರಿಂದಾಗಿ ಹೆಚ್ಚಿನ ಮಂದಿ ಕಡತಕ್ಕೆ ಒಳಗಾಗಿದ್ದಾರೆ. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಾವುದೇ ಪ್ರಾಣಾಪಾಯ ಸಂಭಸಿಲ್ಲ ಎಂದು ತಿಳಿದು ಬಂದಿದೆ.
ಬೇಸಿಗೆ ರಜೆ ಹಿನ್ನಲೆಯಲ್ಲಿ ಕೀಡಾಂಗಣದಲ್ಲಿ ಬೆಳಿಗ್ಗೆ ಮತ್ತು ಸಂಜೆ ಹೆಚ್ಚಿನ ಕ್ರೀಡಾಪಟುಗಳು ಕಂಡು ಬರುತ್ತಿದ್ದಾರೆ. ಅಲ್ಲದೆ ಶಾಲಾ-ಕಾಲೇಜುಗಳು ರಜೆ ಇರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಹಾಗು ಅವರೊಂದಿಗೆ ಪೋಷಕರು ಸಹ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ವಿವಿಧ ಸಂಘ-ಸಂಸ್ಥೆಗಳು ಕ್ರೀಡಾಕೂಟಗಳನ್ನು ಆಯೋಜನೆ ಮಾಡುತ್ತಿದ್ದು, ಇದರಿಂದಾಗಿ ಬೆಳಿಗ್ಗೆಯಿಂದ ಸಂಜೆವರೆಗೂ ಕ್ರೀಡಾಂಗಣದ ತುಂಬಾ ದಟ್ಟನೆ ಕಂಡು ಬರುತ್ತದೆ. ಸಂಬಂಧಪಟ್ಟವರು ಕ್ರೀಡಾಂಗಣಕ್ಕೆ ಆಗಮಿಸುವವರ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ.
