ಡಾ. ಬಿ.ಆರ್ ಅಂಬೇಡ್ಕರ್ ಚಿಂತನೆಗಳು ಮುಂದಿನ ಪೀಳಿಗೆಗೆ ತಲುಪಲಿ : ಎಂ. ರಾಜೇಂದ್ರ
ಭದ್ರಾವತಿಯಲ್ಲಿ ಬಾಪೂಜಿ ಹರಿಜನ ಸೇವಾ ಸಂಘ ಮತ್ತು ಡಾ ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ನಗರದ ಉಂಬ್ಳೆಬೈಲು ರಸ್ತೆ, ವಿದ್ಯಾಮಂದಿರ ಸಮೀಪದ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಕಾರ್ಯಕ್ರಮದ ಭಾಗವಾಗಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಹೋರಾಟದ ಕುರಿತಾದ ಹಾಡುಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಭದ್ರಾವತಿ : ವಿದ್ಯಾರ್ಥಿಗಳು ಅಂಬೇಡ್ಕರ್ ಆಶಯಗಳನ್ನು ಓದಿಗೆ ಮಾತ್ರ ಸೀಮಿತಗೊಳಿಸದೆ ಬದುಕಿಗೆ ಅಳವಡಿಸಿಕೊಳ್ಳಬೇಕು. ಅಲ್ಲದೆ ಅವರ ಬರಹ, ಚಿಂತನೆಗಳು ಮುಂದಿನ ಪೀಳಿಗೆಗೂ ತಲುಪಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಬಾಪೂಜಿ ಹರಿಜನ ಸೇವಾ ಸಂಘದ ಪ್ರದಾನ ಕಾರ್ಯದರ್ಶಿ ಎಂ. ರಾಜೇಂದ್ರ ಕರೆ ನೀಡಿದರು.
ಅವರು ಬಾಪೂಜಿ ಹರಿಜನ ಸೇವಾ ಸಂಘ ಮತ್ತು ಡಾ ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ನಗರದ ಉಂಬ್ಳೆಬೈಲು ರಸ್ತೆ, ವಿದ್ಯಾಮಂದಿರ ಸಮೀಪದ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಕಾರ್ಯಕ್ರಮದ ಭಾಗವಾಗಿ ಏರ್ಪಡಿಸಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್‌ರವರ ಹೋರಾಟದ ಕುರಿತಾದ ಹಾಡುಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏ.೧೪ರಂದು ಆಯೋಜಿಸಲಾಗಿರುವ ಡಾ. ಬಿ.ಅರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ತಮಟೆ ಜಗದೀಶ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್‌ರವರು ತಮ್ಮ ಚಿಂತನೆಗಳನ್ನು ಯಾವುದೇ ವ್ಯಕ್ತಿಗೆ, ಗುಂಪಿಗೆ ಸೀಮಿತ ಗೊಳಿಸದೆ ದೀನದಲಿತರು, ಶೋಷಿತರು ಒಳಗೊಂಡಂತೆ ಇಡೀ ಸಮಾಜದ ಜನರಿಗಾಗಿ ತಮ್ಮ ಚಿಂತನೆಗಳನ್ನು ಮೀಸಲಾಗಿಟ್ಟ ಮಹಾನ್ ವ್ಯಕ್ತಿಯಾಗಿದ್ದಾರೆ. ಇವರ ಚಿಂತನೆ, ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಬಾಪೂಜಿ ಹರಿಜನ ಸೇವಾಸಂಘದ ಅಧ್ಯಕ್ಷ ಎನ್. ಕದರಪ್ಪ ಅಧ್ಯಕ್ಷತೆವಹಿಸಿದ್ದರು. ಗೌರವಾಧ್ಯಕ್ಷ ಎಸ್. ಚಂದ್ರಪ್ಪ, ಪ್ರಗತಿಪರ ಚಿಂತಕ ಜಿ. ರಾಜು, ಉಪಾಧ್ಯಕ್ಷ ಜಿಂಕ್‌ಲೈನ್ ಮಣಿ,ಸಹಕಾರ್ಯದರ್ಶಿ ನರಸಯ್ಯ, ಖಜಾಂಚಿ ಕದರಿ ನರಸಿಂಹಯ್ಯ, ಕಾರ್ಯದರ್ಶಿಗಳಾದ ಸುರೇಶ್, ದಯಾನಂದ್, ರವಿಕುಮಾರ್ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದ ದಯಾನಂದ, ಮಂಜುಳಾ, ದಿವಾಕರ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ನಾಗರಾಜ್, ಕೆ. ರಮ್ಯಾ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
